ADVERTISEMENT

ಕಾಫಿ ಬಟ್ಟಲು ಇದೀಗ ಖಾಲಿ...

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 4:24 IST
Last Updated 1 ಆಗಸ್ಟ್ 2019, 4:24 IST
   

‘ಮೊ ದಲ ಬಾರಿಗೆ ‘ಕೆಫೆ ಕಾಫಿ ಡೇ’ ಕಾಫಿ ರುಚಿಸುತ್ತಿಲ್ಲ. ಗಂಟಲಿಗೂ ಇಳಿಯುತ್ತಿಲ್ಲ..’

ಎಂ.ಜಿ.ರಸ್ತೆಯ ‘ಕೆಫೆ ಕಾಫಿ ಡೇ’ಯಲ್ಲಿ ಕಾಫಿ ಹೀರುತ್ತ ಕುಳಿತಿದ್ದ ಮನೋಜಿತ್‌ ಚಂದ್ರ ವಿಚಲಿತರಾದಂತೆ ಕಂಡು ಬಂದರು. ದಕ್ಷಿಣ ಭಾರತದ ಕಾಫಿ ಸಂಸ್ಕೃತಿಯನ್ನು ದೇಶಕ್ಕೇ ಪರಿಚಯಿಸಿದ್ದ ಯಶಸ್ವಿ ಉದ್ಯಮಿ ಸಿದ್ಧಾರ್ಥ ಅಂತ್ಯ ಹೀಗಾಗುತ್ತದೆ ಎಂದು ಊಹಿಸಿರಲಿಲ್ಲ ಎಂದರು.

ಚಿಕ್ಕಮಗಳೂರು ಜಿಲ್ಲೆಯ ಹಳ್ಳಿಯೊಂದರಿಂದ ಬಂದು ದೊಡ್ಡ ಕಾಫಿ ಸಾಮ್ರಾಜ್ಯ ಕಟ್ಟಿ, ಯಶಸ್ವಿಯಾಗಿದ್ದ ಸಿದ್ಧಾರ್ಥ ನವ ಉದ್ಯಮಿಗಳಿಗೆಲ್ಲ ಆದರ್ಶವಾಗಿದ್ದರು. ನಮ್ಮ ನಡುವಿನ ಮಾದರಿ ಉದ್ಯಮಿಯೊಬ್ಬರು ಇಂತಹ ಸಾವು ಕಂಡಿರುವುದು ನಿಜಕ್ಕೂ ಆಘಾತ ತಂದಿದೆ ಎನ್ನುತ್ತ ಮನೋಜಿತ್‌ ಚಂದ್ರ ದೀರ್ಘ ಉಸಿರು ತೆಗೆದುಕೊಂಡರು.

ADVERTISEMENT

ಬಿಸಿನೆಸ್‌ ಕಾಲೇಜಿನಲ್ಲಿ ಓದುವಾಗ ಯಶಸ್ವಿ ಉದ್ಯಮಿಗಳು ಮತ್ತು ಉದ್ಯಮಗಳ ಬಗ್ಗೆ ಓದುವಾಗ ಸಿದ್ಧಾರ್ಥ ‘ಕೆಫೆ ಕಾಫಿ ಡೇ’ (ಸಿಸಿಡಿ) ಕಟ್ಟಿ ಬೆಳಸಿದ ಸಾಹಸವನ್ನು ಕೇಳಿ ತಿಳಿದಿದ್ದೆವು. ಬೆಂಗಳೂರಿಗೆ ಬಂದ ನಂತರ ಕುತೂಹಲಕ್ಕೆ ಸ್ನೇಹಿತರೊಂದಿಗೆ ‘ಸಿಸಿಡಿ’ ಪ್ರವೇಶಿಸಿದ ನಾವು ನಿಧಾನವಾಗಿ ಕಾಫಿ ಸಂಸ್ಕೃತಿಗೆ ಒಗ್ಗಿಕೊಂಡೆವು. ಅದರ ಶ್ರೇಯ ‘ಸಿಸಿಡಿ’ಗೆ ಸಲ್ಲಬೇಕು ಎಂದರು.

ಬಿಸಿನೆಸ್‌ ವಿದ್ಯಾರ್ಥಿಯಾದ ನನಗೆ ನಿಜಕ್ಕೂ ‘ಸಿಸಿಡಿ’ ಯಶಸ್ಸು ಆಶ್ಚರ್ಯ ತಂದಿತ್ತು. ಸಿದ್ಧಾರ್ಥ ಅವರ ಬಗ್ಗೆ ಹೆಮ್ಮೆಯಾಗಿತ್ತು. ಅವರ ವ್ಯಕ್ತಿತ್ವದ ಬಗ್ಗೆ ಕೇಳಿದ್ದೆ. ಅವರಂತೆ ಉದ್ಯಮಿಯಾಗಬೇಕು ಎಂಬ ಆಸೆ ಚಿಗುರೊಡೆದಿತ್ತು. ಅಂತಹ ಉದ್ಯಮಿಯೊಬ್ಬರು ದಿಢೀರ್‌ ನಿರ್ಗಮಿಸುತ್ತಾರೆ ಎಂದು ಎಣಿಸಿರಲಿಲ್ಲ ಎಂದು ನೋವು ತುಂಬಿದ ಧ್ವನಿಯಲ್ಲಿ ಹೇಳಿದರು.

ಮೂಲತಃ ಪಶ್ಚಿಮ ಬಂಗಾಳದ ಮನೋಜಿತ್‌ಚಂದ್ರ ಉದ್ಯೋಗ ಅರಿಸಿ ಬೆಂಗಳೂರಿಗೆ ಬಂದವರು. ಶ್ಯೂರ್‌ವೇವ್ಸ್‌ ಮೀಡಿಯಾ ಟೆಕ್‌ ಎಂಬ ಖಾಸಗಿ ಕಂಪನಿಯಲ್ಲಿ ನೆಲೆ ಕಂಡುಕೊಂಡ ನಂತರ ‘ಸಿಸಿಡಿ’ ಯಶೋಗಾಥೆಯನ್ನು ಹತ್ತಿರದಿಂದ ಕಂಡವರು. ಅಲ್ಲಿಂದ ಇಲ್ಲಿಯ ಕಾಫಿಯ ಜತೆಗಿನ ನಂಟು ಗಾಢವಾಗುತ್ತ ಸಾಗಿತು. ಸಿದ್ಧಾರ್ಥ ಕಾಫಿ ರುಚಿಯಷ್ಟೇ ಅಲ್ಲ, ಗ್ರಾಮೀಣ ಹಿನ್ನೆಲೆಯಿಂದ ಬಂದಂತಹ ನಮ್ಮಂತಹ ಸಾವಿರಾರು ಯುವಕರು ಕೂಡ ಯಶಸ್ವಿ ಉದ್ಯಮಿಗಳಾಗಬಹುದು ಎಂಬ ಕನಸನ್ನು ನಮ್ಮಲ್ಲಿ ಬಿತ್ತಿತ್ತು.. ಎನ್ನುವಾಗ ದನಿ ನಡುಗಿದಂತೆನಿಸಿತು.

ಜಾಗತಿಕ ಮಟ್ಟದಲ್ಲಿ ಇಷ್ಟೊಂದು ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಿದ ಉದ್ಯಮಿಯೊಬ್ಬರು ಹೀಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ನಂಬಲಾಗುತ್ತಿಲ್ಲ. ಈ ಅಸಹಜ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸಾವಿರಾರು ಕೋಟಿ ರೂಪಾಯಿ ವಹಿವಾಟಿನಲ್ಲಿ ಇದೆಲ್ಲ ಸಾಮಾನ್ಯ. ಇದ್ದು ಗೆಲ್ಲಬೇಕಿತ್ತು ಎಂದು ಖಾಸಗಿ ಬ್ಯಾಂಕ್‌ ಉದ್ಯೋಗಿ ರಶ್ಮಿ ಧ್ವನಿಗೂಡಿಸಿದರು.

ಮುಂಬೈನ ರಶ್ಮಿ ಅವರಿಗೆ ಕೆಫೆ ಕಾಫಿ ಡೇ ಮತ್ತು ಸಿದ್ಧಾರ್ಥ ಉದ್ಯಮದ ಏರಿಳಿತಗಳ ಬಗ್ಗೆ ಚೆನ್ನಾಗಿ ಗೊತ್ತು. ಸಿದ್ಧಾರ್ಥ ಅವರ ಸರಳ ಮತ್ತು ಸಭ್ಯ ನಡೆ, ನುಡಿ ಅವರಿಗೆ ಇಷ್ಟವಾಗಿತ್ತು. ನಷ್ಟ, ಸಾಲ ಮತ್ತು ತೆರಿಗೆ ಸಂಕಷ್ಟಗಳು ವ್ಯಾಪಾರ, ಉದ್ಯಮದ ಭಾಗ. ಆಸ್ತಿ ಮಾರಿ ಸಾಲ ತೀರಿಸಬಹುದಿತ್ತು. ಸಿದ್ಧಾರ್ಥ ಅವರ ಮಾನಸಿಕ ಸ್ಥಿತಿ, ಒತ್ತಡಗಳು ಯಾರಿಗೆ ಗೊತ್ತು? ಏನೇ ಆದರೂ ಅವರು ಈ ರೀತಿಯ ದುಡುಕಿನ ನಿರ್ಧಾರ ಕೈಗೊಳ್ಳಬಾರದಿತ್ತು ಎಂದರು.

ಮಧ್ಯಾಹ್ನ ಊಟದ ವೇಳೆಗೆ ‘ಸಿಸಿಡಿ’ಯೊಳಗೆ ಕಾಲಿಟ್ಟ ಗ್ರಾಹಕರಿಗೆ ವಾತಾವರಣಎಂದಿನಂತಿಲ್ಲ ಎಂದೆನಿಸಿದ್ದು ಸಹಜ.

ಕೆಫೆಯ ಮೂಲೆಯಲ್ಲಿದ್ದ ಬೆರಳೆಣಿಕೆಯಷ್ಟು ಗ್ರಾಹಕರ ಮಾತಿನಲ್ಲಿ ವಿಷಾದವೇ ತುಂಬಿತ್ತು.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಿದ್ಧಾರ್ಥ ಅವರು ಉದ್ಯಮಿ ವಿಜಯ ಮಲ್ಯ ಅವರಂತೆ ದೇಶ ತೊರೆದಿರಬಹುದು ಎಂದು ಭಾವಿಸಿದ್ದೆವು. ಒಟ್ಟಾರೆ ಅವರು ಜೀವಂತವಾಗಿದ್ದರೆ ಸಾಕು ಎಂದುಕೊಂಡೆವು. ಕನ್ನಡಿಗ ಉದ್ಯಮಿಗಳಿಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಮೂಲೆಯಲ್ಲಿ ಸ್ನೇಹಿತರೊಂದಿಗೆ ಕುಳಿತಿದ್ದ ಗುತ್ತಿಗೆದಾರ ಜವರೇಗೌಡ ಮನದ ನೋವು ತೋಡಿಕೊಂಡರು.

ಸಿದ್ಧಾರ್ಥ ಅವರ ಬಳಿ ಹಣ, ಆಸ್ತಿ ಎಲ್ಲವೂ ಇತ್ತು. ಅವರೊಬ್ಬ ಯಶಸ್ವಿ ಉದ್ಯಮಿಯಾಗಿದ್ದರು. ಇಷ್ಟು ವರ್ಷ ಉದ್ಯಮ ಕಟ್ಟಿದ ಅನುಭವ ಬೆನ್ನಿಗಿತ್ತು ಇತ್ತು. ಆಸ್ತಿ ಮಾರಿ ಸಾಲ ತೀರಿಸಿ ಮತ್ತೆ ಮೊದಲಿನಿಂದ ಆರಂಭಿಸಬಹುದಿತ್ತು. ಮತ್ತೊಂದು ಹೊಸ ಉದ್ಯಮ ಕಟ್ಟಿ ಬೆಳೆಸಬಹುದಿತ್ತು. ಸೂಕ್ಷ್ಮ ಮನಸ್ಸಿನ ಅವರು ಸದ್ಯದ ಜಾಗತಿಕ ಮಾರುಕಟ್ಟೆಯ ಪೈಪೋಟಿಗೆ ಹೆದರಿದರಾ, ಗೊತ್ತಿಲ್ಲ ಎಂದು ಗೌಡರ ಜತೆಗಿದ್ದ ಗುತ್ತಿಗೆದಾರ ಸ್ನೇಹಿತರು ಧ್ವನಿಗೂಡಿಸಿದರು.

‘ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರ ಸ್ಥಿತಿಯೂ ಉತ್ತಮವಾಗಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಎನ್ನುವುದೊಂದೇ ಸಮಾಧಾನದ ಸಂಗತಿ’ ಎಂದು ಇನ್ನುಳಿದವರು ಕಾಫಿ ಬೆಳೆಗಾರರ ಸಂಕಷ್ಟ ಬಿಡಿಸಿಟ್ಟರು.

ಜಾಗತೀಕರಣ, ಮುಕ್ತ ಆರ್ಥಿಕ ನೀತಿ, ವಿದೇಶಿ ಬಂಡವಾಳ, ಬಹುರಾಷ್ಟ್ರೀಯ ಕಂಪನಿಗಳ ಹಾವಳಿಗೆ ದೇಶೀಯ ಉದ್ಯಮಿಗೆ ಒದಗಿದ ಸ್ಥಿತಿ ಇದೆ. ವಿದೇಶಿ ಉದ್ಯಮಿಗಳಿಗೆ ಸುಲಭ ವಹಿವಾಟು ನಡೆಸುವ ವಾತಾವರಣ ನಿರ್ಮಿಸುತ್ತೇವೆ ಎನ್ನುವ ಸರ್ಕಾರಗಳು ದೇಶೀಯ ಉದ್ಯಮಿಗಳ ರಕ್ಷಣೆಗೆ ಏಕೆ ಧಾವಿಸುತ್ತಿಲ್ಲ? ಬದಲಾಗಿ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಛೂ ಬಿಟ್ಟು ಕಿರುಕುಳ ನೀಡುತ್ತವೆ ಇದ್ಯಾವ ನ್ಯಾಯ ಎನ್ನುವುದು ಉದ್ಯಮಿ ಸುಖಬೀರ್‌ ಸಿಂಗ್‌ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.