ADVERTISEMENT

‘ಕಾಲ್‌ ಗರ್ಲ್’ ಮೋಹಕ್ಕೆ ₹ 30 ಲಕ್ಷ ಕಳೆದುಕೊಂಡ- ಒಂದಲ್ಲ ಎರಡೆರಡು ಬಾರಿ ಮೋಸಕ್ಕೆ

ಎರಡು ಬಾರಿ ವಂಚನೆ: ಬುದ್ದಿ ಕಲಿಯದ ದೂರುದಾರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 21:11 IST
Last Updated 30 ಜೂನ್ 2022, 21:11 IST
   

ಬೆಂಗಳೂರು: ಜಾಲತಾಣ ಮೂಲಕ ಕಾಲ್‌ ಗರ್ಲ್‌ ಸಂಪರ್ಕಿಸಿ ಮನೆಗೆ ಕರೆಸಿಕೊಳ್ಳಲು ಮುಂದಾಗಿದ್ದ ನಗರದ ನಿವಾಸಿಯೊಬ್ಬರು ₹ 30 ಲಕ್ಷ ಕಳೆದುಕೊಂಡಿದ್ದು, ಈ ಬಗ್ಗೆ ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ 49 ವರ್ಷದ ನಿವಾಸಿ ಇತ್ತೀಚೆಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಾಲ್‌ ಗರ್ಲ್ ಬಗ್ಗೆ ಮೋಹ ಹೊಂದಿದ್ದ ನಿವಾಸಿ, ಬೆಂಗಳೂರಿನಲ್ಲಿರುವ ಕಾಲ್‌ ಗರ್ಲ್‌ಗಳನ್ನು ಸಂಪರ್ಕಿಸಲು ಗೂಗಲ್‌ನಲ್ಲಿ ಹುಡುಕಾಡಿದ್ದರು. ಜಾಲತಾಣವೊಂದರ ಲಿಂಕ್ ಸಿಕ್ಕಿತ್ತು. ಅದನ್ನು ತೆರೆದಿದ್ದ ನಿವಾಸಿ, ‘ನನಗೆ ಕಾಲ್‌ಗರ್ಲ್ ಬೇಕು’ ಎಂಬುದಾಗಿ ನಮೂದಿಸಿ ವೈಯಕ್ತಿಕ ವಿವರಗಳನ್ನು ದಾಖಲಿಸಿ ಏಪ್ರಿಲ್ 8ರಂದು ನೋಂದಣಿ ಮಾಡಿಕೊಂಡಿದ್ದರು.’

ADVERTISEMENT

‘ಜಾಲತಾಣದ ಪ್ರತಿನಿಧಿ ಸೋಗಿನಲ್ಲಿ ನಿವಾಸಿಗೆ ಕರೆ ಮಾಡಿದ್ದ ಮಹಿಳೆಯೊಬ್ಬರು. ‘ನಮ್ಮ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲ್‌ಗರ್ಲ್‌ಗಳು ಇದ್ದಾರೆ. ನೋಂದಣಿ ಶುಲ್ಕವಾಗಿ ₹ 840 ಪಾವತಿಸಿದರೆ, ಕಾಲ್‌ಗರ್ಲ್‌ಗಳ ವೈಯಕ್ತಿಕ ಮಾಹಿತಿ ಹಾಗೂ ಮೊಬೈಲ್ ನಂಬರ್ ನೀಡುತ್ತೇವೆ’ ಎಂದಿದ್ದರು. ಅದಕ್ಕೆ ಒಪ್ಪಿದ್ದ ನಿವಾಸಿ, ಹಣ ಪಾವತಿ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ನೋಂದಣಿ ಶುಲ್ಕ ಪಡೆದಿದ್ದ ಮಹಿಳೆ ಹಾಗೂ ಇತರರು, ಬೇರೆ ಬೇರೆ ಮೊಬೈಲ್‌ ಸಂಖ್ಯೆಯಿಂದ ದೂರುದಾರರಿಗೆ ಕರೆ ಮಾಡಲಾರಂಭಿಸಿದ್ದರು. ಕಾಲ್‌ ಗರ್ಲ್ ಹೆಸರಿನಲ್ಲಿ ಮಾತನಾಡಿದ್ದ ಆರೋಪಿಗಳು, ‘ಹಣ ನೀಡಿದರೆ, ನಿಮ್ಮ ಮನೆಗೆ ಬರುತ್ತೇವೆ’ ಎಂದಿದ್ದರು. ಇದನ್ನು ನಂಬಿದ್ದ ಆರೋಪಿ, ಹಂತ ಹಂತವಾಗಿ ₹ 16 ಲಕ್ಷ ಪಾವತಿಸಿದ್ದ. ಇದಾದ ನಂತರ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಬುದ್ದಿ ಕಲಿಯದ ದೂರುದಾರ: ‘₹ 16 ಲಕ್ಷ ಕಳೆದುಕೊಂಡರೂ ಬುದ್ದಿ ಕಲಿಯದ ದೂರುದಾರ, ಪುನಃ ಕಾಲ್‌ಗರ್ಲ್‌ಗಳಿಗಾಗಿ ಹುಡು
ಕಾಟ ಆರಂಭಿಸಿದ್ದರು. ಜಾಲತಾಣವೊಂದರಲ್ಲಿ ಸಿಕ್ಕ ಮೊಬೈಲ್ ನಂಬರ್‌ಗೆ ಕರೆ ಮಾಡಿ, ‘ನನಗೆ ಕಾಲ್‌ಗರ್ಲ್ ಬೇಕು’ ಎಂಬುದಾಗಿ ಹೇಳಿಕೊಂಡಿದ್ದರು. ನೋಂದಣಿ ಶುಲ್ಕ ₹ 499 ಪಾವತಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಎರಡನೇ ಬಾರಿಯೂ ದೂರುದಾರರಿಗೆ ಹಲವು ಯುವತಿಯರು ಕರೆ ಮಾಡಿದ್ದರು. ಮನೆಗೆ ಬರುವುದಾಗಿ ಹೇಳಿ ಹಂತ ಹಂತವಾಗಿ ಬ್ಯಾಂಕ್‌ ಖಾತೆಗಳಿಗೆ ₹ 14 ಲಕ್ಷ ಹಾಕಿಸಿಕೊಂಡಿದ್ದರು. ಇದಾದ ನಂತರ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾರೆ. ಘಟನೆ ಬಗ್ಗೆ ಸ್ನೇಹಿತರಿಗೆ ವಿಷಯ ತಿಳಿಸಿದ್ದ ದೂರುದಾರ, ಅವರ ಮೂಲಕ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.