ADVERTISEMENT

ಶ್ರಮಿಕ ವರ್ಗದ ಮಹಾಧರಣಿ | ಜನ‌ವಿರೋಧಿ ನೀತಿ ಹಿಮ್ಮೆಟ್ಟಿಸಲು ಕರೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 20:55 IST
Last Updated 27 ನವೆಂಬರ್ 2023, 20:55 IST
<div class="paragraphs"><p>ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಮಹಾಧರಣಿಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರು &nbsp;</p></div>

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಮಹಾಧರಣಿಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರು  

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸುವುದು ಹಾಗೂ ರೈತ–ಕಾರ್ಮಿಕ ವಿರೋಧಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ‘ಶ್ರಮಿಕ ವರ್ಗದ ಮಹಾಧರಣಿ’ಗೆ ಸೋಮವಾರ ರಾಜ್ಯದ ವಿವಿಧೆಡೆಯಿಂದ ಬೃಹತ್‌ ಸಂಖ್ಯೆಯಲ್ಲಿ ಹೋರಾಟಗಾರರು ಬಂದಿದ್ದರು.

ADVERTISEMENT

ಮಹಾಧರಣಿಯ ಎರಡನೇ ದಿನ ‘ಸಂಘರ್ಷದ ದಿನ’ವಾಗಿ ಆಚರಣೆ ಮಾಡಲಾಯಿತು. ಇದಕ್ಕೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರರು ಹೋರಾಟಗಾರರು ಸಾಕ್ಷಿಯಾದರು.

ಕೇಂದ್ರ ಸರ್ಕಾರದ ಹಲವು ಜನವಿರೋಧಿ ನೀತಿಗಳನ್ನು ಖಂಡಿಸಿ, ಜನಪರ ಕಾಯ್ದೆಗೆ ಆಗ್ರಹಿಸಿದರು. ಕೇಂದ್ರ– ರಾಜ್ಯ ಸರ್ಕಾರಗಳು ತಮ್ಮ ಅಹವಾಲು ಆಲಿಸುವಂತೆ ಒತ್ತಾಯಿಸಿದರು.

ಸಂಯುಕ್ತ ಕಿಸಾನ್‌ ಮೋರ್ಚಾದ ನಾಯಕ ವಿಜು ಕೃಷ್ಣನ್‌ ಮಾತನಾಡಿ, ‘ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಸರ್ಕಾರ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ಜನರಿಗೆ ಒಳ್ಳೆಯ ದಿನಗಳು ಬರುತ್ತವೆ, ಕಡಿಮೆ ಬೆಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದೊರೆಯುವಂತೆ ಮಾಡುತ್ತೇವೆ ಎಂದು ಹೇಳಿ, 2014 ರಲ್ಲಿ ಮೋದಿ ಅಧಿಕಾರಕ್ಕೇರಿದ್ದರು. ಇದಕ್ಕೆ ತದ್ವಿರುದ್ಧ ನಡೆ ನೋಡುತ್ತಿದ್ದೇವೆ’ ಎಂದು ಹೇಳಿದರು.

‘ರೈತರು ಮತ್ತು ಕಾರ್ಮಿಕರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ 4 ಲಕ್ಷಕ್ಕೂ ಹೆಚ್ಚು ರೈತರು, ಯುವಕರು ಹಾಗೂ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಉತ್ಪನ್ನಕ್ಕೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದರೆ, ಅದು ಮತಕ್ಕಾಗಿ ನೀಡಿದ್ದ ಭರವಸೆ ಎಂದು ಕೃಷಿ ಮಂತ್ರಿ ಹೇಳಿದ್ದಾರೆ. ಅವರಿಗೆ ನಾಚಿಕೆ ಆಗಬೇಕು’ ಎಂದು ಹೇಳಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದೆವು. ಈಗ ಸಂವಿಧಾನ ಉಳಿಸಿಕೊಳ್ಳಲು ಹೋರಾಟ ಮಾಡುವ ಸ್ಥಿತಿ ಬಂದಿದೆ. 2024ರ ಲೋಕಸಭೆ ಚುನಾವಣೆ ದೇಶದ ಜನರಿಗೆ ಮಹತ್ವದ ಚುನಾವಣೆ. ಕೋಮುವಾದ, ಬಂಡವಾಳಶಾಹಿಯನ್ನೇ ಪ್ರತಿನಿಧಿಸುವ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ಸೋಲುತ್ತದೆ. ಚಳವಳಿ ಮೂಲಕ ಬದಲಾವಣೆ ತರಬೇಕಿದೆ’ ಎಂದು ಒತ್ತಾಯಿಸಿದರು.

ಪ್ರಾಂತ ರೈತ ಸಂಘದ ಮುಖಂಡ ಟಿ.ಯಶವಂತ್‌, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್‌, ಲೇಖಕಿ ಷರೀಫಾ, ಇಂದೂಧರ ಹೊನ್ನಾಪುರ, ಎಸ್‌.ಆರ್‌.ಹಿರೇಮಠ್‌, ಮೀನಾಕ್ಷಿ ಬಾಳಿ, ಅಮ್ಜದ್ ಅಲಿ ಇದ್ದರು. ಸ್ಥಳಕ್ಕೆ ಬಂದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಹಕ್ಕೊತ್ತಾಯ ಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.