ADVERTISEMENT

ಕಬ್ಬನ್‌ ಉದ್ಯಾನ: ಕ್ಯಾಮೆರಾಗೆ ನಿರ್ಬಂಧ?

ಪಕ್ಷಿಗಳು, ಇತರೆ ಜೀವಸಂಕುಲಗಳಿಗೆ ತೊಂದರೆ ಕುರಿತ ದೂರು; ತೋಟಗಾರಿಕೆ ಇಲಾಖೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 21:55 IST
Last Updated 12 ನವೆಂಬರ್ 2019, 21:55 IST
ಕಬ್ಬನ್‌ ಉದ್ಯಾನ (ಸಾಂದರ್ಭಿಕ ಚಿತ್ರ)
ಕಬ್ಬನ್‌ ಉದ್ಯಾನ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ನಿತ್ಯ ಫೋಟೊಶೂಟ್‌ಗಾಗಿ ಸಾಕಷ್ಟು ಮಂದಿ ಬೀಡುಬಿಟ್ಟಿರುತ್ತಾರೆ. ಖಾಸಗಿ ಹಾಗೂ ವೆಡ್ಡಿಂಗ್‌ ಫೊಟೊಶೂಟ್‌ಗಾಗಿ ಉದ್ಯಾನಕ್ಕೆ ಭೇಟಿ ನೀಡುವವರಿಗೆ ಚಿರಪರಿಚಿತ. ಆದರೆ, ಉದ್ಯಾನದಲ್ಲಿ ಸದ್ಯದಲ್ಲೇ ಫೋಟೊಶೂಟ್‌ ಸಂಪೂರ್ಣ ನಿಷೇಧ ಆಗಲಿದೆ.

ಉದ್ಯಾನದಲ್ಲಿರುವ ಅಪರೂಪದ ಪಕ್ಷಿಗಳು ಹಾಗೂ ಇನ್ನಿತರ ಜೀವಸಂಕುಲಗಳ ಮೇಲೆ ಕ್ಯಾಮೆರಾ ಬಳಕೆಯಿಂದ ಪರಿಣಾಮ ಬೀಳುತ್ತದೆ ಎಂದು ಸಾರ್ವಜನಿಕರು ದೂರಿರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ತೋಟಗಾರಿಕೆ ಇಲಾಖೆ ಕಬ್ಬನ್‌ ಹಾಗೂ ಲಾಲ್‌ಬಾಗ್‌ ಉದ್ಯಾನಗಳಲ್ಲಿಫೊಟೊಶೂಟ್‌ ನಿಷೇಧಿಸಿ, ಛಾಯಾಗ್ರಾಹಕರಿಗೆ ನೋಟಿಸ್‌ ನೀಡಿತ್ತು.

ADVERTISEMENT

ಲಾಲ್‌ಬಾಗ್‌ನಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದರೆ, ಕಬ್ಬನ್‌ ಉದ್ಯಾನದಲ್ಲಿ ಈ ನಿಯಮ ಅಷ್ಟರಮಟ್ಟಿಗೆ ಪಾಲನೆಯಾಗಿಲ್ಲ.

‘ಕಬ್ಬನ್‌ ಉದ್ಯಾನದಲ್ಲಿ ಒಂದು ವರ್ಷದಿಂದಲೂ ಫೊಟೊಶೂಟ್‌ ನಿಷೇಧಿಸಲಾಗಿದೆ.ವಿಡಿಯೊ ಚಿತ್ರೀಕರಣ, ಕಿರುಚಿತ್ರ ತಯಾರಿಕೆಗೆ ಅವಕಾಶ ನೀಡುತ್ತಿಲ್ಲ. ಆದರೆ, ನಿಯಮ ಮೀರಿ ಉದ್ಯಾನದಲ್ಲಿ ಚಿತ್ರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಸಾರ್ವಜನಿಕರಿಗೆ ಹಲವು ಬಾರಿ ಸೂಚನೆ ನೀಡಿದರೂ ನಿಯಮ ಪಾಲಿಸುವುದಿಲ್ಲ. ಈ ನಿಟ್ಟಿನಲ್ಲಿ ಫೊಟೊಶೂಟ್‌ ಸಂಪೂರ್ಣ ನಿಷೇಧಿಸುವ ಚಿಂತನೆ ನಡೆಸಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಕಬ್ಬನ್‌) ಜಿ.ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಿ–ವೆಡ್ಡಿಂಗ್‌ ಫೊಟೊಶೂಟ್‌ಗಾಗಿ ಬರುವವರು ಭಿನ್ನ ಹಾಗೂ ವಿಶೇಷ ಚಿತ್ರಗಳನ್ನು ತೆಗೆಸಿಕೊಳ್ಳಲು ಹೆಚ್ಚುವರಿ ಬಟ್ಟೆಗಳನ್ನು ತಂದು, ಸಾರ್ವಜನಿಕವಾಗಿ ಬಟ್ಟೆ ಬದಲಾಯಿಸುತ್ತಾರೆ’ ಎಂಬ ದೂರುಗಳಿವೆ.

‘ಇದರಿಂದ ಉದ್ಯಾನದಲ್ಲಿ ಕಾಲ ಕಳೆಯಲು ಮುಜುಗರವಾಗುತ್ತಿದೆ ಎಂದು ಪಾದಚಾರಿಗಳು, ವಾಯುವಿಹಾರಿಗಳು ದೂರಿದ್ದಾರೆ. ಹೀಗಾಗಿ, ಉದ್ಯಾನದಲ್ಲಿ ಕ್ಯಾಮೆರಾ ಬಳಕೆ ನಿಷೇಧಿಸಲಾಗುವುದು. ಈ ಬಗ್ಗೆ ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ಅಧಿಕಾರಿಗಳ ಜೊತೆಗೆ ಚರ್ಚೆ ಬಳಿಕ ಶೀಘ್ರದಲ್ಲೇ ಈ ನಿಯಮ ಜಾರಿಯಾಗಲಿದೆ’ ಎಂದರು.

‘ಮೊಬೈಲ್ ಕ್ಯಾಮೆರಾಗೆ ಅವಕಾಶ’
‘ಉದ್ಯಾನದಲ್ಲಿಹೈ ರೆಸ‌ಲ್ಯೂಷನ್, ಡಿಎಸ್‌ಎಲ್‌ಆರ್‌ ಕ್ಯಾಮೆರಾ ಚಿತ್ರೀಕರಣಕ್ಕೆ ಮಾತ್ರ ನಿಷೇಧ ಹೇರಲಾಗುವುದು. ಉಳಿದಂತೆ ಸಾಮಾನ್ಯವಾಗಿ ಮೊಬೈಲ್‌ನಲ್ಲಿ ಛಾಯಾಚಿತ್ರ ತೆಗೆದುಕೊಳ್ಳುವವರಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ’ ಎಂದು ಕುಸುಮಾ ತಿಳಿಸಿದರು.

*
ಕಬ್ಬನ್‌ ಉದ್ಯಾನ ಒಂದು ಸಂರಕ್ಷಿತ ಪ್ರದೇಶ. ಉದ್ಯಾನದ ಅಂದಕ್ಕೆ ಯಾವುದೇ ಧಕ್ಕೆ ಆಗಬಾರದು. ಹೀಗಾಗಿ ಕ್ಯಾಮೆರಾ ಬಳಕೆ ನಿಷೇಧಿಸಲಾಗುವುದು.
–ಜಿ.ಕುಸುಮಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ (ಕಬ್ಬನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.