ADVERTISEMENT

ಕೆನಡಾದಲ್ಲಿ ಕೆಲಸದ ಆಮಿಷ: ₹ 18.41 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 16:13 IST
Last Updated 13 ಸೆಪ್ಟೆಂಬರ್ 2021, 16:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೆನಡಾದ ಟೊರಾಂಟೊ ಜನರಲ್ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹ 18.41 ಲಕ್ಷ ಪಡೆದು ವಂಚಿಸಲಾಗಿದೆ. ಈ ಬಗ್ಗೆ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಾಜಾಜಿನಗರದ 8ನೇ ಅಡ್ಡರಸ್ತೆ ನಿವಾಸಿಯಾದ 44 ವರ್ಷದ ಮಹಿಳೆ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್‌ನಲ್ಲಿ ಮಹಿಳೆ ಖಾತೆ ಹೊಂದಿದ್ದಾರೆ. ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ, ‘ನಾನು ಕೆನಡಾದ ಟೊರಾಂಟೊ ಜನರಲ್ ಆಸ್ಪತ್ರೆಯ ವ್ಯವಸ್ಥಾಪಕ. ನಮ್ಮ ಆಸ್ಪತ್ರೆಯಲ್ಲಿ ಕೆಲಸಗಳು ಖಾಲಿ ಇವೆ. ನೀವು ಒಪ್ಪಿದರೆ, ಕೆಲಸ ಕೊಡಿಸುತ್ತೇನೆ’ ಎಂದಿದ್ದ.’

ADVERTISEMENT

‘ಕೆನಡಾಗೆ ಬರಲು ವೀಸಾ ಮಾಡಿಸಬೇಕು. ವೈದ್ಯಕೀಯ ಹಾಗೂ ಪೊಲೀಸ್ ಪರಿಶೀಲನೆ ಅಗತ್ಯವಿದೆ. ಇದಕ್ಕೆಲ್ಲ ಹಣ ಖರ್ಚಾಗುವುದಾಗಿ ಆರೋಪಿ ಹೇಳಿದ್ದ. ಅದನ್ನು ನಂಬಿದ್ದ ಮಹಿಳೆ, ಆರೋಪಿ ತಿಳಿಸಿದ್ದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ₹ 18.41 ಲಕ್ಷ ಜಮೆ ಮಾಡಿದ್ದರು. ಆರೋಪಿ, ಪುನಃ ಹಣಕ್ಕೆ ಬೇಡಿಕೆ ಇರಿಸಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಬಳಿಕವೇ ಮಹಿಳೆ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.