ADVERTISEMENT

ಕೆನರಾ ಬ್ಯಾಂಕ್‌ ಮೇಲ್ಛಾವಣಿ ಕೊರೆದು ಕಳ್ಳತನಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:51 IST
Last Updated 25 ಡಿಸೆಂಬರ್ 2018, 19:51 IST

ಬೆಂಗಳೂರು: ಕೊಡಿಗೇಹಳ್ಳಿ ಸಮೀಪದ ಲೊಟ್ಟೆಗೊಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸಿದ್ದು, ಆ ಸಂಬಂಧ ಶಾಖಾ ವ್ಯವಸ್ಥಾಪಕಶಿವರಾಮ್ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದಾರೆ.

‘ನಗದು ಹಾಗೂ ಚಿನ್ನಾಭರಣ ಸಂಗ್ರಹಿಸಿಟ್ಟಿದ್ದ ಬ್ಯಾಂಕ್‌ನ ಕೊಠಡಿಯ ಮೇಲ್ಛಾವಣಿ ಕೊರೆದಿರುವ ದುಷ್ಕರ್ಮಿಗಳು, ಕಬ್ಬಿಣದ ಕಂಬಿಯೊಂದನ್ನು ಮುರಿದಿರುವುದಾಗಿ ಶಿವರಾಮ್‌ ಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಹುಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಬ್ಯಾಂಕ್ ಇದೆ. ಕೊಠಡಿಯೊಂದನ್ನು ನಗದು ಹಾಗೂ ಚಿನ್ನಾಭರಣ ಸಂಗ್ರಹಕ್ಕೆ ಬಳಸಿಕೊಳ್ಳಲಾಗುತ್ತಿದೆ.ಡಿ. 20ರಂದು ಸಂಜೆ 5 ಗಂಟೆಗೆ ಆ ಕೊಠಡಿಗೆ ಬೀಗ ಹಾಕಲಾಗಿತ್ತು. ಮರುದಿನದಿಂದ ವ್ಯವಸ್ಥಾಪಕ ಶಿವರಾಮ್ ಪ್ರಸಾದ್ ರಜೆ ಇದ್ದಿದ್ದರಿಂದಾಗಿ, ಅಧಿಕಾರಿಗಳಾದ ಕೇಶವಮೂರ್ತಿ ಮತ್ತು ಗೋವರ್ಧನ್ ಅವರೇ ಬ್ಯಾಂಕ್‌ನ ಉಸ್ತುವಾರಿ ವಹಿಸಿಕೊಂಡಿದ್ದರು’.

ADVERTISEMENT

‘ಡಿ. 4ರಂದು ಬೆಳಿಗ್ಗೆ ಅಧಿಕಾರಿಗಳು ಕೊಠಡಿ ತೆರೆದು ನೋಡಿದಾಗಲೇ ವಿಷಯ ಗೊತ್ತಾಗಿದೆ. ಬೀರುಗಳನ್ನು ಪರಿಶೀಲಿಸಿದಾಗ, ಹಣ ಮತ್ತು ಚಿನ್ನಾಭರಣ ಅಲ್ಲಿಯೇ ಇದ್ದವು’ ಎಂದರು.

‘ಬ್ಯಾಂಕ್‌ ಸಮೀಪದಲ್ಲೇ ಎಟಿಎಂ ಘಟಕವಿದೆ. ಅದರ ಭದ್ರತಾ ಸಿಬ್ಬಂದಿ, ಘಟಕದೊಳಗೆ ರಾತ್ರಿ ಮಲಗಿದ್ದಾಗಲೇ ಈ ಘಟನೆ ನಡೆದಿದೆ. ದುಷ್ಕರ್ಮಿಗಳನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.