ADVERTISEMENT

ಕೆಪಿಎಸ್‌ಸಿ ರದ್ದು ಸೂಕ್ತ: ಹೈಕೋರ್ಟ್‌

ಯುಪಿಎಸ್‌ಸಿ ಮಾದರಿ ವ್ಯವಸ್ಥೆ ತರುವಂತೆ ವಿಭಾಗೀಯ ಪೀಠದ ಸಲಹೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 21:32 IST
Last Updated 15 ನವೆಂಬರ್ 2020, 21:32 IST
court
court   

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಪ್ರಕ್ರಿಯೆಗಳಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಸಾಧ್ಯವಾಗದಿದ್ದಲ್ಲಿ ಆಯೋಗವನ್ನು ರದ್ದುಪಡಿಸುವುದೇ ಸೂಕ್ತ’ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಹೇಳಿದೆ.

1998ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿನ ಅಕ್ರಮ ಪ್ರಶ್ನಿಸಿ ಖಲೀಲ್‌ ಅಹಮ್ಮದ್‌ ಮತ್ತು ಇತರರು ಸಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಪೀಠ, ‘ಕರ್ನಾಟಕದ ಘನತೆ ಮತ್ತು ಗೌರವವನ್ನು ಕಾಪಾಡುವುದು ಹಾಗೂ ನ್ಯಾಯದ ದೃಷ್ಟಿಯಿಂದ ಕೆಪಿಎಸ್‌ಸಿಯನ್ನು ರದ್ದುಮಾಡಿ, ಕೇಂದ್ರ ಲೋಕಸೇವಾ ಆಯೋಗದ ಮಾದರಿಯ ನೇಮಕಾತಿ ವ್ಯವಸ್ಥೆಯನ್ನು ತರುವುದು ಉತ್ತಮ’ ಎಂದು ಅಭಿಪ್ರಾಯಪಟ್ಟಿದೆ.

‘1998ನೇ ಸಾಲಿನ ನೇಮಕಾತಿ ವಿವಾದ 22 ವರ್ಷಗಳಾದರೂ ಕೊನೆಗೊಂಡಿಲ್ಲ. 1999 ಮತ್ತು 2004ನೇ ಸಾಲಿನ ನೇಮಕಾತಿಗಳೂ ವಿವಾದದಲ್ಲಿ ಸಿಲುಕಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿಗೆ ಸಾಧ್ಯವಾಗದೇ ಇದ್ದರೆ ಆಯೋಗವನ್ನು ರದ್ದು ಮಾಡಲು ಇದು ಸಕಾಲ’ ಎಂದು ನ್ಯಾಯಪೀಠ ಶುಕ್ರವಾರ ನೀಡಿರುವ ತೀರ್ಪಿನಲ್ಲಿ ಹೇಳಿದೆ.

ADVERTISEMENT

‘ಕೆಪಿಎಸ್‌ಸಿ ಅಥವಾ ರಾಜ್ಯ ಸರ್ಕಾರ ಮಾಡಿದ ತಪ್ಪುಗಳ ಕಾರಣದಿಂದ ಸೃಷ್ಟಿಯಾದ ನೇಮಕಾತಿ ವಿವಾದ 22 ವರ್ಷಗಳಿಂದ ಜೀವಂತವಾಗಿಯೇ ಉಳಿದಿದೆ. 2002ರಿಂದ 2020ರವರೆಗೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿ ಎದುರು ಸುತ್ತುತ್ತಲೇ ಇದೆ. ಪ್ರಕರಣದಲ್ಲಿನ ತಾಂತ್ರಿಕ ಅಂಶಗಳು ಮತ್ತು ನ್ಯಾಯಾಲಯದಲ್ಲಿನ ಶ್ರೇಣೀಕೃತ ವ್ಯವಸ್ಥೆಯ ದುರ್ಲಾಭ ಪಡೆದ ಕೆಲವು ಅಭ್ಯರ್ಥಿಗಳು, ಅಧಿಕಾರಿಗಳು ವಿಚಾರವನ್ನು ಪದೇ ಪದೇ ನ್ಯಾಯಾಲಯಗಳಿಗೆ ತಂದಿದ್ದಾರೆ’ ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನರ್ಹರ ಕೈಯಲ್ಲಿ ಅಧಿಕಾರ: 1998, 1999 ಮತ್ತು 2004ರ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಈ ಕಾರಣದಿಂದಾಗಿಯೇ ಅನರ್ಹರು ಆಯ್ಕೆ ಆಗಿರುವ ಸಾಧ್ಯತೆ ತೀರಾ ಜಾಸ್ತಿ ಇದೆ. ಅಂಥವರು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ ಸೇರಿದಂತೆ ಮಹತ್ವದ ಹುದ್ದೆಗಳಲ್ಲಿ ಕುಳಿತಿದ್ದಾರೆ. ಆಡಳಿತ ವ್ಯವಸ್ಥೆಯ ಪ್ರಮುಖ ಸ್ಥಾನ ಮತ್ತು ಅರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಕುಳಿತು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಪಾರದರ್ಶಕವಲ್ಲದ ವಿಧಾನದಲ್ಲಿ ಆಯ್ಕೆಯಾದ ಇಂಥ ವ್ಯಕ್ತಿಗಳಿಂದ ಕರ್ನಾಟಕದ ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ ಎಂದು ನ್ಯಾಯಪೀಠ ಪ್ರಶ್ನಿಸಿದೆ.

‘ಕೆಪಿಎಸ್‌ಸಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರನ್ನಾಗಿ ಉತ್ತಮ ಚಾರಿತ್ರ್ಯವುಳ್ಳ, ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ವ್ಯಕ್ತಿಗಳನ್ನು ನೇಮಕ ಮಾಡುವುದು ಸರ್ಕಾರದ ಕರ್ತವ್ಯ. ಹಾಗೆ ಮಾಡಿದ್ದಲ್ಲಿ ಅರ್ಹ, ದಕ್ಷ ಮತ್ತು ಪ್ರಾಮಾಣಿಕ ವ್ಯಕ್ತಿಗಳನ್ನು ಅಧಿಕಾರಿಗಳನ್ನಾಗಿ ನೇಮಕ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ದೋಷಪೂರಿತ, ತಪ್ಪುದಾರಿಯ ನೇಮಕಾತಿಗಳಿಂದಾಗಿ ರಾಜ್ಯ ಮತ್ತು ಸಾರ್ವಜನಿಕರ ಹಿತಕ್ಕೆ ಧಕ್ಕೆಯಾಗುತ್ತಿದೆ’ ಎಂದು ಹೈಕೋರ್ಟ್‌ ಹೇಳಿದೆ.

ಈಗಿನಂತೆ ನೇಮಕಾತಿ ನಡೆಸುವುದು ಕೆಪಿಎಸ್‌ಸಿ ಸ್ಥಾಪನೆಯ ಹಿಂದಿರುವ ಉದ್ದೇಶವೇ ಆಗಿರಲಿಲ್ಲ. ಮೂಲ ಉದ್ದೇಶಕ್ಕೆ ತಕ್ಕಂತೆ ಕೆಪಿಎಸ್‌ಸಿ ಕೆಲಸ ಮಾಡಿದ್ದಲ್ಲಿ ನೇಮಕಾತಿಯಲ್ಲಿ ಪಾರ್ದರ್ಶಕತೆ ಇರುತ್ತಿತ್ತು ಮತ್ತು ಮೆರಿಟ್‌ ಆಧಾರದಲ್ಲೇ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದರು. ಆಗ ಯಾವ ವಿವಾದಗಳಿಗೂ ಅವಕಾಶ ಇರುತ್ತಿರಲಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ.

ಕೆಪಿಎಸ್‌ಸಿಯಲ್ಲಿ ಸುಧಾರಣೆ ತರುವ ಸಂಬಂಧ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರದಿರುವುದು ಮತ್ತು ತಜ್ಞರ ಸಮಿತಿಗಳ ವರದಿಗಳನ್ನು ಪಾಲಿಸದೇ ಇರುವ ಬಗ್ಗೆಯೂ ವಿಭಾಗೀಯ ಪೀಠ ಆಕ್ಷೇಪ ವ್ಯಕ್ತಪಡಿಸಿದೆ.

ಮಧ್ಯಂತರ ಅರ್ಜಿಗಳ ವಜಾ

ಹೈಕೋರ್ಟ್‌ ವಿಭಾಗೀಯ ಪೀಠ 2016ರ ಜೂನ್‌ 21ರಂದು ನೀಡಿದ್ದ ತೀರ್ಪಿನ ಹಲವು ಅಂಶಗಳನ್ನು ಅನುಷ್ಠಾನಕ್ಕೆ ತರುವಂತೆ ಕೋರಿದ್ದ ಹತ್ತು ಮಧ್ಯಂತರ ಅರ್ಜಿಗಳನ್ನು ನ್ಯಾಮೂರ್ತಿ ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

ಹೊಸದಾಗಿ ನೇಮಕಾತಿಯಾದ 28 ಜನರಿಗೆ ಸೇವಾ ಜೇಷ್ಠತೆ, ಬಡ್ತಿ, ವೇತನ ನಿಗದಿ, ಐಎಎಸ್‌ ಮುಂಬಡ್ತಿ ಸಮಯದಲ್ಲಿ ಷರತ್ತು ವಿಧಿಸಿರುವುದನ್ನು ಹಿಂಪಡೆಯಬೇಕೆಂಬುದೂ ಸೇರಿದಂತೆ ಅರ್ಜಿದಾರರ ಕೋರಿಕೆಗಳು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿವೆ. ಕೆಎಟಿಯಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಬಹುದು ಎಂದು ಪೀಠ ತೀರ್ಪಿನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.