ಬೆಂಗಳೂರು: ‘ಉಪ ಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಟಿ.ಬಿ. ಜಯಚಂದ್ರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಲಿದೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಉಪ ಚುನಾವಣೆಯಲ್ಲಿ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಬಲ ಇದೆ. ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ’ ಎಂದರು.
ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆಯಿಲ್ಲ. ಒಂದೊಂದು ಕ್ಷೇತ್ರದಲ್ಲಿ 8 ಮಂದಿ ಇದ್ದಾರೆ. ಆರ್.ಆರ್. ನಗರದಲ್ಲಿ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿರುವ ಬಗ್ಗೆ ಗೊತ್ತಿಲ್ಲ’ ಎಂದರು.
ಎಲ್ಲ ಚುನಾವಣೆಗಳೂ ಪ್ರತಿಷ್ಠೆಯೇ: ‘ಎಲ್ಲ ಚುನಾವಣೆಗಳು ಕೂಡ ಎಲ್ಲ ಪಕ್ಷಗಳಿಗೆ ಪ್ರತಿಷ್ಠೆ. ಯಾವುದೇ ಒಂದು ಕ್ಷೇತ್ರದ ಚುನಾವಣೆ ಮಾತ್ರ ಪ್ರತಿಷ್ಠೆಯಾಗುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆರ್.ಆರ್. ನಗರದ ಟಿಕೆಟ್‌ಗಾಗಿ ಅರ್ಜಿಗಳು ಬಂದಿವೆ. ಪಕ್ಷದ ನಾಯಕರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಈ ಹಿಂದಿನ ಚುನಾವಣೆಗಳಂತೆ ಉಪ ಚುನಾವಣೆಯನ್ನೂ ಎದುರಿಸುತ್ತೇವೆ. ನಾನು ಅಧ್ಯಕ್ಷನಾದರೂ ಪಕ್ಷದ ಕಾರ್ಯಕರ್ತ. ಶಿರಾ ಅಥವಾ ಆರ್.ಆರ್. ನಗರ ಕ್ಷೇತ್ರ ಮಾತ್ರ ಪ್ರತಿಷ್ಠೆ ಆಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.