ADVERTISEMENT

ಅಪಘಾತ; ನ್ಯಾಯಮೂರ್ತಿ ಕಾರು ಜಖಂ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 22:28 IST
Last Updated 3 ಜನವರಿ 2020, 22:28 IST

ಬೆಂಗಳೂರು: ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಜಖಂಗೊಂಡಿದೆ.

‘ನ್ಯಾಯಮೂರ್ತಿಯವರು ಮನೆಯಿಂದ ದೇವನಹಳ್ಳಿಯತ್ತ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಕಾರಿನ ಮುಂಭಾಗ ಹಾಗೂ ಹಿಂಭಾಗ ಮಾತ್ರ ಜಖಂಗೊಂಡಿದೆ. ಕಾರಿನಲ್ಲಿದ್ದ ನ್ಯಾಯಮೂರ್ತಿ ಹಾಗೂ ಚಾಲಕನಿಗೆ ಯಾವುದೇ ಗಾಯವಾಗಿಲ್ಲ’ ಎಂದುಯಲಹಂಕ ಸಂಚಾರ ಪೊಲೀಸರು ಹೇಳಿದರು.

‘ಬೆಳಿಗ್ಗೆ 8.45ರ ಸುಮಾರಿಗೆ ನ್ಯಾಯಮೂರ್ತಿಯವರು ಯಲಹಂಕ ನಿವಾಸದಿಂದ ಕಾರಿನಲ್ಲಿ ಹೊರಟಿದ್ದರು. ಅದೇ ಸಂದರ್ಭದಲ್ಲೇ ರಾಜು ಎಂಬಾತ ತನ್ನ ಕಾರಿನಲ್ಲಿ ಕೋಗಿಲು ಕ್ರಾಸ್ ಬಳಿ ಬಂದಿದ್ದ. ಭದ್ರತಾ ಸಿಬ್ಬಂದಿ ಸೂಚನೆ ನೀಡಿದರೂ ನಿಲ್ಲದೇ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ನ್ಯಾಯಮೂರ್ತಿಯವರ ಕಾರಿಗೆ ಡಿಕ್ಕಿ ಹೊಡೆಸಿದ್ದ.’

ADVERTISEMENT

‘ನ್ಯಾಯಮೂರ್ತಿಯವರ ಕಾರನ್ನು ಅದರ ಚಾಲಕ ಸ್ಥಳದಲ್ಲೇ ನಿಲ್ಲಿಸಿದ್ದ. ಹಿಂದೆಯೇ ಬರುತ್ತಿದ್ದ ಬೆಂಗಾವಲು ವಾಹನ ಸಹ ಆ ಕಾರಿಗೆ ಡಿಕ್ಕಿ ಹೊಡೆದಿತ್ತು. ಕಾರಿನ ಮುಂಭಾಗ ಹಾಗೂ ಹಿಂಭಾಗ ಎರಡೂ ಜಖಂಗೊಂಡವು’ ಎಂದು ಪೊಲೀಸರು ಹೇಳಿದರು.

ಚಾಲಕ ಬಂಧನ: ‘ಅಪಘಾತಕ್ಕೆ ಚಾಲಕ ರಾಜು ನಿರ್ಲಕ್ಷ್ಯವೇ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ. ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.