ADVERTISEMENT

ವಂಚನೆ ಆರೋಪಿ ಕಾರಿನಲ್ಲಿ ಹ್ಯಾರಿಸ್‌ ಸ್ಟಿಕ್ಕರ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:33 IST
Last Updated 20 ಮಾರ್ಚ್ 2024, 16:33 IST
ಎನ್‌.ಎ. ಹ್ಯಾರಿಸ್
ಎನ್‌.ಎ. ಹ್ಯಾರಿಸ್   

ಬೆಂಗಳೂರು: ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಕೇರಳದ ಕೊಚ್ಚಿಯ ಮುಹಮ್ಮದ್ ಹಫೀಜ್‌ ಎಂಬ ವ್ಯಕ್ತಿಯ ಮನೆಯಲ್ಲಿ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರೀಸ್‌ ಹೆಸರಿನಲ್ಲಿ ವಿಧಾನಸಭೆಯ ಅಧಿಕೃತ ಸ್ಟಿಕ್ಕರ್‌ ಹೊಂದಿರುವ ಕಾರು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.

ವಿವಿಧ ವ್ಯಕ್ತಿಗಳಿಂದ ₹ 103.73 ಕೋಟಿ ಹಣ ಸಂಗ್ರಹಿಸಿ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇರಳ, ಕರ್ನಾಟಕ, ಮತ್ತು ಗೋವಾದ ರಾಜ್ಯಗಳಲ್ಲಿ ಹಫೀಜ್‌ ಹಾಗೂ ಇತರ ಆರೋಪಿಗಳಿಗೆ ಸೇರಿದ ಒಂಬತ್ತು ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಗುರುವಾರದಿಂದ ಭಾನುವಾರದವರೆಗೂ ಶೋಧ ನಡೆಸಲಾಗಿತ್ತು.

‘ಕರ್ನಾಟಕ ವಿಧಾನಸಭೆಯ ಶಿಷ್ಟಾಚಾರ ವಿಭಾಗವು ಶಾಸಕ ಎನ್‌.ಎ. ಹ್ಯಾರೀಸ್‌ ಹೆಸರಿನಲ್ಲಿ ವಿತರಿಸಿದ್ದ ಅಧಿಕೃತ ಸ್ಟಿಕ್ಕರ್‌ ಹೊಂದಿದ್ದ ಕಾರು ಹಫೀಜ್‌ ಮನೆಯಲ್ಲಿ ಪತ್ತೆಯಾಗಿದೆ. ಹ್ಯಾರೀಸ್‌ ಮಗ, ರಾಜ್ಯ ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್ ಹ್ಯಾರೀಸ್‌ ನಲಪಾಡ್‌ ಈ ಕಾರನ್ನು ಖರೀದಿಸಿದ್ದು, ನಫೀಹ್‌ ಮುಹಮ್ಮದ್ ನಾಸೀರ್‌ ಎಂಬಾತನ ಹೆಸರಿನಲ್ಲಿ ನೋಂದಣಿ ಮಾಡಿಸಲಾಗಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ನಾಸೀರ್‌,  ಶಾಸಕ ಹ್ಯಾರೀಸ್‌ ಅವರ ಸಂಬಂಧಿ ಹಾಗೂ ರಾಜಕೀಯ ಬೆಂಬಲಿಗ ಕೂಡ ಹೌದು’ ಎಂದು ಇ.ಡಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಶೋಧ ಕಾರ್ಯಾಚರಣೆಯಲ್ಲಿ 1.6 ಕೆ.ಜಿ. ಚಿನ್ನ, ₹ 12.5 ಲಕ್ಷ ನಗದು, ಏಳು ಮೊಬೈಲ್‌ ಫೋನ್‌ಗಳು, ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬ್ಯಾಂಕ್‌ ಖಾತೆಗಳಲ್ಲಿರುವ ₹ 4.4 ಕೋಟಿ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.