ADVERTISEMENT

ಸಾಧು ಕೋಕಿಲ, ಮಂಡ್ಯ ರಮೇಶ್‌ ವಿರುದ್ಧದ ಪ್ರಕರಣಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 20:30 IST
Last Updated 9 ಡಿಸೆಂಬರ್ 2019, 20:30 IST
   

ಬೆಂಗಳೂರು: ಮೈಸೂರಿನ ಮಸಾಜ್ ಸಲೂನ್‌ನ ಮಹಿಳಾ ಸಿಬ್ಬಂದಿಯೊಬ್ಬರ ಘನತೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರನಟ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

‘ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಎಚ್.ಎಸ್.ಚಂದ್ರಮೌಳಿ, ‘ತನಿಖೆ ವೇಳೆ ಅರ್ಜಿದಾರರ ವಿರುದ್ಧದ ಆರೋಪ ಸಾಬೀತು ಪಡಿಸುವಂಥ ಅಂಶಗಳು ಲಭ್ಯ ವಾಗಿಲ್ಲ. ಆದ್ದರಿಂದ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ಪೀಠ ವಿಚಾರಣೆಗೆ ಮಧ್ಯಂತರ ತಡೆ ಆದೇಶ ನೀಡಿದೆ.

ADVERTISEMENT

ಪ್ರಕರಣವೇನು?

ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು 2017ರ ಡಿ. 20ರಂದು, ‘ಲೈಕ್ ಟ್ರೆಂಡ್ ಫ್ಯಾಮಿಲಿ ಸಲೂನ್’ ಮೇಲೆ ದಾಳಿ ನಡೆಸಿದ್ದರು. ಆ ವೇಳೆ ಸಲೂನ್‌ನಲ್ಲಿದ್ದ ಮಹಿಳಾ ಸಿಬ್ಬಂದಿ ವಿಚಾರಣೆ ನಡೆಸಿದಾಗ, ‘ಸಲೂನ್‌ಗೆ ಭೇಟಿ ನೀಡುವ ಗ್ರಾಹಕರ ಹೇಳುವ ದೇಹದ ಎಲ್ಲ ಭಾಗಗಳಿಗೂ ಮಸಾಜ್ ಮಾಡುವಂತೆ ಸಲೂನ್ ಮಾಲೀಕ ರಾಜೇಶ್ ನನಗೆ ಹೇಳಿದ್ದಾರೆ. ಈ ಸಲೂನ್‌ಗೆ ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಅವರೂ ಬರುತ್ತಿದ್ದರು’ ಎಂದು ತಿಳಿಸಿದ್ದರು. ಈ ಹೇಳಿಕೆ ಅನ್ವಯ ಪೊಲೀಸರು, ನಟರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.