ಸಾಂದರ್ಭಿಕ ಚಿತ್ರ
ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಅನುಮಾನಾಸ್ಪದವಾಗಿ ಪತ್ತೆಯಾದ ಸೂಟ್‌ಕೇಸ್‌ವೊಂದರಲ್ಲಿ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ.
ಸೂಟ್‌ಕೇಸ್ ಗಮನಿಸಿದ್ದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಅದರಲ್ಲಿ ನಗದು ಇರುವುದು ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿವೆ.
ಬಸ್ ಆಂಧ್ರಪ್ರದೇಶದಿಂದ ನಗರಕ್ಕೆ ಬರುತ್ತಿತ್ತು. ಅದರಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ಹಣವನ್ನು ತಂದಿದ್ದರು. ಅಮೃತಹಳ್ಳಿ ಜಂಕ್ಷನ್ ಬಳಿ ಕೆಲವರು ಬಸ್‌ನಿಂದ ಇಳಿದಿದ್ದರು. ಅವರು ತಮ್ಮ ಸೂಟ್‌ಕೇಸ್ ಇಳಿಸಿಕೊಳ್ಳುವ ಭರದಲ್ಲಿ ನಗದು ತುಂಬಿದ್ದ ಸೂಟ್‌ಕೇಸ್ ಸಹ ಇಳಿಸಿಕೊಂಡಿದ್ದರು. ಸೂಟ್‌ಕೇಸ್ ತಮ್ಮದಲ್ಲ ಎಂಬುದು ಗೊತ್ತಾದಾಗ ರಸ್ತೆ ಬದಿಯಲ್ಲೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ.
‘ಮೆಜೆಸ್ಟಿಕ್‌ನಲ್ಲಿ ಇಳಿದಾಗ ತನ್ನ ಸೂಟ್‌ಕೇಸ್ ನಾಪತ್ತೆ ಆಗಿರುವುದು ಆ ವ್ಯಕ್ತಿಯ ಗಮನಕ್ಕೆ ಬಂದಿತ್ತು. ತಕ್ಷಣವೇ ಬಸ್ ಕ್ಲೀನರ್‌ಗೆ ಮಾಹಿತಿ ನೀಡಿದ್ದರು. ಕ್ಲೀನರ್ ಜತೆಗೆ ಅಮೃತಹಳ್ಳಿ ಠಾಣೆಗೆ ಬಂದು ನಗದು ತುಂಬಿದ್ದ ಸೂಟ್‌ಕೇಸ್ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಂಕ್‌ನಿಂದ ಹಣ ಡ್ರಾ ಮಾಡಿದ್ದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಿದರು. ದಾಖಲೆ ನೀಡಿದ ಬಳಿಕ ಹಣ ವಾಪಸ್ ನೀಡಲಾಗಿದೆ. ಮದುವೆ ಸಮಾರಂಭದ ಖರ್ಚಿಗೆ ಆಂಧ್ರಪ್ರದೇಶದಿಂದ ಹಣ ತಂದಿದ್ದಾಗಿ ಆ ವ್ಯಕ್ತಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.