ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಮೂರು ದಿನಗಳಲ್ಲಿ 2.66 ಲಕ್ಷ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
‘ಜಿಬಿಎ ವ್ಯಾಪ್ತಿಯಲ್ಲಿ ಶನಿವಾರದಿಂದ ಸಮೀಕ್ಷೆ ಆರಂಭವಾಗಿದ್ದು, ಸೋಮವಾರ ಒಂದೇ ದಿನ 1.41 ಲಕ್ಷ ಮನೆಗಳಲ್ಲಿ ಸಮೀಕ್ಷೆ ನಡೆದಿದೆ. ಆದರೆ, ಸಮೀಕ್ಷೆ ಇನ್ನಷ್ಟು ವೇಗ ನೀಡಬೇಕಾಗಿದ್ದು, ಪ್ರತಿ ದಿನ ಮೂರು ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕಾದ ಗುರಿಯನ್ನು ನಾವು ಹೊಂದಿದ್ದೇವೆ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಸುಮಾರು 50 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಸಮೀಕ್ಷೆ ನಡೆಯಬೇಕಾಗಿದ್ದು, ಆದಷ್ಟು ಬೇಗೆ ಮುಗಿಸಲು ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಮೂರು ಸಾವಿರ ಜನರನ್ನು ಮಾತ್ರ ಸಮೀಕ್ಷಕರನ್ನಾಗಿ ನಿಯೋಜಿಸಲಾಗಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸುಮಾರು 15 ಸಾವಿರ ಸಮೀಕ್ಷಕರನ್ನು ನೇಮಿಸಲಾಗಿದೆ. ಆದಷ್ಟು ಬೇಗ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಸಮೀಕ್ಷಕರು ಅವರಿಗೆ ನೀಡುವ ಪ್ರದೇಶದ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅಧಿಕಾರಿಗಳು ಅದರ ಬಗ್ಗೆ ತಿಳಿದುಕೊಳ್ಳಬೇಕು. ಹೀಗಾಗಿ, ಕೆಲವು ಸಮಸ್ಯೆಗಳಾಗಿ, ನಿಧಾನಗತಿಯಾಗಿದೆ. ಹಿರಿಯ ಅಧಿಕಾರಿಗಳು ಪರಿಹಾರ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ಸಮೀಕ್ಷೆಗೆ ಹಾಜರಾಗಲು ಸಮಸ್ಯೆ ಇರುವವರು ಅದರ ಬಗ್ಗೆ ವಿವರಣೆ ನೀಡಬೇಕು. ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಅನಾರೋಗ್ಯ, ಚಿಕ್ಕ ಮಕ್ಕಳು, ಮನೆಯಲ್ಲಿ ಸಮಸ್ಯೆ ಸೇರಿದಂತೆ ಸೂಕ್ತ ಕಾರಣಗಳಿದ್ದರೆ ಅವರಿಗೆ ವಿನಾಯಿತಿ ನೀಡಲಾಗುತ್ತದೆ. ಕಾರಣಗಳಿಲ್ಲದೆ ಸಮೀಕ್ಷೆಗೆ ಹಾಜರಾಗದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸಮೀಕ್ಷೆಗೆ ಬಂದ ಹಾಜರಾತಿಯನ್ನು ಪಡೆದುಕೊಂಡೇ ಅವರಿಗೆ ವೇತನ ಬಿಡುಗಡೆ ಮಾಡಬೇಕು ಎಂದು ಆಯಾ ಇಲಾಖೆಗಳಿಗೆ ತಿಳಿಸಲಾಗಿದೆ’ ಎಂದರು.
‘ಸಮೀಕ್ಷೆಗೆ ಬಾರದವರಲ್ಲಿ ಈವರೆಗೂ ಯಾರನ್ನೂ ಅಮಾನತು ಮಾಡಿಲ್ಲ. ಅಂತಹವರ ಬಗ್ಗೆ ಮಾಹಿತಿ ಕಲೆ ಹಾಕಿ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಸರಿಪಡಿಸಲಾಗುವುದು: ‘ಐದು ನಗರ ಪಾಲಿಕೆಗಳ ವಾರ್ಡ್‌ಗಳ ಹೆಸರುಗಳನ್ನು ತರಾತುರಿಯಲ್ಲಿ ಅನುವಾದ ಮಾಡುವಾಗ ಕೆಲವು ತಪ್ಪುಗಳಿರುವುದು ಗಮನಕ್ಕೆ ಬಂದಿದೆ. ಆಕ್ಷೇಪಣೆಗೆ ಅವಕಾಶವಿದ್ದು, ಅವುಗಳನ್ನು ಸರಿಪಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಮಹೇಶ್ವರ್ ರಾವ್ ಉತ್ತರಿಸಿದರು.
ಮರಗಳ ಸಮೀಕ್ಷೆ: ನಗರದಲ್ಲಿರುವ ಒಣ ಹಾಗೂ ಬೀಳುವ ಹಂತದಲ್ಲಿರುವ ಮರಗಳ ಬಗ್ಗೆ ಮತ್ತೆ ಸಮೀಕ್ಷೆ ಮಾಡಿ, ಅನಾಹುತಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯ ವಿಭಾಗದವರು ಈ ಬಗ್ಗೆ ನಿಗಾವಹಿಸಬೇಕಾಗುತ್ತದೆ ಎಂದರು.
ಮಳೆಯಾಗುತ್ತಿರುವುದರಿಂದ ಗುಂಡಿ ಮುಚ್ಚುವ ಕೆಲಸದಲ್ಲಿ ನಿಧಾನಗತಿಯಾಗಿದೆ. ಇನ್ನೂ ಸುಮಾರು ಮೂರು ಸಾವಿರ ಗುಂಡಿಗಳಿದ್ದು, ದುರಸ್ತಿ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.