ADVERTISEMENT

ಭವಿಷ್ಯದ ಪೀಳಿಗೆಗಾಗಿ ಸಮೀಕ್ಷೆ; ಎಲ್ಲಾ ಜಾತಿಯವರೂ ಸಹಕರಿಸಿ: ಡಿಕೆಶಿ ಮನವಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 10:13 IST
Last Updated 4 ಅಕ್ಟೋಬರ್ 2025, 10:13 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: 'ಎಲ್ಲಾ ಸಮಾಜದ ಮುಂದಿನ ಪೀಳಿಗೆಗೆ ನ್ಯಾಯ ಒದಗಿಸುವ ಸಲುವಾಗಿ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡಬೇಕು' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಕರಿಗೆ ಮನವಿ ಮಾಡಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಶನಿವಾರ ಚಾಲನೆ ನೀಡಿದ ನಂತರ, ಸದಾಶಿವನಗರ ನಿವಾಸದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ADVERTISEMENT

'ಜಿಬಿಎ ವ್ಯಾಪ್ತಿಯಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತಿದ್ದು, ನನ್ನ ಮನೆಯಲ್ಲೂ ಸಮೀಕ್ಷೆ ನಡೆಸಿದ್ದಾರೆ. ನಾನು ಎಲ್ಲಾ ಮಾಹಿತಿ ನೀಡಿದ್ದೇನೆ. ಸಾರ್ವಜನಿಕರು ಕೂಡ ತಾಳ್ಮೆಯಿಂದ ಮಾಹಿತಿ ಒದಗಿಸಬೇಕು. ಎಲ್ಲಾ ಜಾತಿ ಸಮುದಾಯದವರು ಸಹಕಾರ ನೀಡಬೇಕು' ಎಂದು ಕೋರಿದ್ದಾರೆ.

ಹೆಚ್ಚು ಪ್ರಶ್ನೆಗಳಿದ್ದು ಸರಳೀಕರಣ ಮಾಡಬೇಕಿತ್ತು ಎಂಬ ಪ್ರಶ್ನೆಗೆ, 'ನಾನು ಕೂಡ ಇಂದೇ ಈ ಪ್ರಶ್ನೆಗಳನ್ನು ನೋಡಿದೆ. ಇವುಗಳನ್ನು ಸರಳೀಕರಣ ಮಾಡಬೇಕಿತ್ತು. ನಗರ ಪ್ರದೇಶದಲ್ಲಿ ಜನರಿಗೆ ತಾಳ್ಮೆ ಕಡಿಮೆ' ಎಂದಿದ್ದಾರೆ.

ವೈಯಕ್ತಿಕ ಮಾಹಿತಿ ಕುರಿತ ಕೆಲವು ಪ್ರಶ್ನೆಗಳಿವೆ ಎಂಬುದಕ್ಕೆ, 'ಅಂತಹ ಪ್ರಶ್ನೆಗಳಿಗೆ ಉತ್ತರ ನೀಡಲು ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಮೀಕ್ಷೆದಾರರು ಪ್ರಶ್ನೆಗಳನ್ನು ಕೇಳುತ್ತಾರೆ. ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಬೆಂಗಳೂರು ನಗರದಲ್ಲಿ ಸಮೀಕ್ಷೆ ನಡೆಸುವಾಗ ಸೂಕ್ಷ್ಮವಾಗಿರಬೇಕು ಎಂದು ಸಮೀಕ್ಷೆದಾರರಿಗೂ ಹೇಳಿದ್ದೇನೆ' ಎಂದು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಲು ಅನೇಕರು ನಿರಾಕರಿಸುತ್ತಿದ್ದಾರೆ ಎಂದು ಕೇಳಿದಾಗ, 'ತಿಳಿವಳಿಕೆ ನೀಡಬೇಕಿರುವುದು ನಮ್ಮ ಕರ್ತವ್ಯ. ಅದನ್ನು ಮಾಡುತ್ತೇವೆ' ಎಂದಿದ್ದಾರೆ.

ಸರ್ವರ್ ಸಮಸ್ಯೆ ಕುರಿತು, 'ಅದನ್ನೆಲ್ಲಾ ಸರಿಪಡಿಸಲಾಗುವುದು. ಆನ್‌ಲೈನ್ ಮೂಲಕವೂ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಅಲ್ಲಿಯೂ ನೀವು ಮಾಹಿತಿ ನೀಡಬೇಕು' ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಮಾಹಿತಿ ನೀಡಿದರೆ ಮತಾಂತರಕ್ಕೆ ಕಾರಣವಾಗಲಿದೆ ಎಂಬ ಬಿಜೆಪಿ ಆರೋಪಗಳಿಗೆ, 'ದೊಡ್ಡವರ ಬಗ್ಗೆ ನಾವೇನು ಹೇಳೋಣ?' ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ತೆರಿಗೆ ಪಾಲಿನ ಅನ್ಯಾಯದ ಬಗ್ಗೆ ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ತೆರಿಗೆ, ನಮ್ಮ ಹಕ್ಕು. ನಮಗೆ ಈಗ 15-20 ಸಾವಿರ ಕೋಟಿ ನಷ್ಯವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು” ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.