ADVERTISEMENT

ಜಾತಿವಾರು ಸಮೀಕ್ಷೆ: ಹಳ್ಳಿಕಾರ ಎಂದೇ ನಮೂದಿಸಿ; ಕೆ.ಎಂ.ನಾಗರಾಜ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 14:45 IST
Last Updated 16 ಸೆಪ್ಟೆಂಬರ್ 2025, 14:45 IST
   

ಬೆಂಗಳೂರು: ‘ಜಾತಿವಾರು ಸಮೀಕ್ಷೆಯ ವೇಳೆ ಜಾತಿ ಕಾಲಂನಲ್ಲಿ ‘ಹಳ್ಳಿಕಾರ’ ಎಂದೇ ನಮೂದಿಸಬೇಕು’ ಎಂದು ಕರ್ನಾಟಕ ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ. ನಾಗರಾಜ್ ಕರೆ ನೀಡಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1941ರ ಗಣತಿ ವೇಳೆ ಹಳ್ಳಿಕಾರ ಸಮುದಾಯವನ್ನು ರಾಜ್ಯದ 35ನೇ ಪ್ರತ್ಯೇಕ ಜಾತಿಯಾಗಿ ಪರಿಗಣಿಸಲಾಗಿದೆ. ಈಗ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಯಲ್ಲಿ ಹಳ್ಳಿಕಾರ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ ಹಾಗೂ ಜಾತಿ ಕಾಲಂನಲ್ಲಿ ಹಳ್ಳಿಕಾರ ಎಂದೇ ನಮೂದಿಸಬೇಕು. ಇದರಲ್ಲಿ ಯಾವುದೇ ಉಪ ಜಾತಿಯನ್ನು ನಮೂದಿಸಬಾರದು. ಇದಕ್ಕೆ ಸಂಬಂಧಿಸಿದಂತೆ ಇತರೆ ಯಾವುದೇ ಒತ್ತಾಯ ಹಾಗೂ ಗೊಂದಲಗಳಿಗೆ ಮಣಿಯಬಾರದು’ ಎಂದು ಹೇಳಿದರು.

‘ನಮ್ಮ ಸಮುದಾಯವು ಪಶುಸಂಗೋಪನೆಯ ವೃತ್ತಿ ಮಾಡುತ್ತಿದೆ. ಹಳ್ಳಿಕಾರ ತಳಿಯ ರಾಸುಗಳನ್ನು ತಲೆತಲಾಂತರದಿಂದ ಪಾಲನೆ ಹಾಗೂ ಪೋಷಣೆ ಮಾಡಿಕೊಂಡು ಬರುತ್ತಿದೆ. ಆದ್ದರಿಂದ ಕುಲಕಸುಬಿನ ಕಾಲಂನಲ್ಲಿ ‘ಪಶುಸಂಗೋಪನೆ’ ಎಂದೇ ನಮೂದಿಸಬೇಕು’ ಎಂದರು.

ADVERTISEMENT

‘ಹಳ್ಳಿಕಾರ ಸಮುದಾಯವು 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಬೆಂಗಳೂರು ನಗರ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಮಗಳೂರು ಹಾಗೂ ಹಾಸನ ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ನಮ್ಮ ಸಮುದಾಯವನ್ನು ಬಲಾಢ್ಯ ಒಕ್ಕಲಿಗ ಸಮುದಾಯದ ಜೊತೆಗೆ ಸೇರಿಸಲಾಗಿದ್ದು, ಇದಕ್ಕೆ ನಮ್ಮ ವಿರೋಧವಿದೆ. ನಾವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಇದುವರೆಗೆ ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿಲ್ಲ. ಆದ್ದರಿಂದ ನಮ್ಮ ಸಮುದಾಯವನ್ನು ಪ್ರವರ್ಗ– 1ರಲ್ಲಿ ಸೇರಿಸಬೇಕು’ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.