ಸಿದ್ದರಾಮಯ್ಯ , ಮುಖ್ಯಮಂತ್ರಿ
ಬೆಂಗಳೂರು: ‘ಇದೇ 22ರಿಂದಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದ್ದು, ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ಕುರಿತು ಚರ್ಚೆ ನಡೆದಿತ್ತು. ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗಾಗಿ ಸಿದ್ಧಪಡಿಸಿರುವ ಕೈಪಿಡಿಯ ಜಾತಿ ಪಟ್ಟಿಯಲ್ಲಿ ಹೊಸ ಜಾತಿಗಳ ಸೇರ್ಪಡೆ ಹಾಗೂ ಹಿಂದೂ ಜಾತಿಗಳ ಹೆಸರಿನ ಜೊತೆಗೆ ಕ್ರಿಶ್ಚಿಯನ್ ಪದದ ಉಲ್ಲೇಖದ ಕುರಿತು ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಯೋಗದ ಈ ನಡೆಯನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿದ್ದು ಸರ್ಕಾರ, ಪಕ್ಷದ ವರ್ಚಸ್ಸಿಗೆ ಹಿನ್ನಡೆಯಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು. ಇದರಿಂದಾಗಿ, ಸಮೀಕ್ಷೆ ಮುಂದೂಡಿಕೆಯಾಗಬಹುದೆಂಬ ಚರ್ಚೆಗಳು ನಡೆದಿದ್ದವು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ, ‘ಸಮೀಕ್ಷೆಯ ಬಗ್ಗೆ ಸರ್ಕಾರದ ಅಭಿಪ್ರಾಯಗಳನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಆಯೋಗವು ಸಂವಿಧಾನಬದ್ದವಾದ ಸಂಸ್ಥೆ. ಇಂತಹ ವಿಚಾರಗಳಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಆಯೋಗಕ್ಕೇ ಇದೆ. ನಾವು ನಿರ್ದೇಶನ ನೀಡಲು ಬರುವುದಿಲ್ಲ. ಆಯೋಗ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದರು.
‘ಸಚಿವ ಸಂಪುಟ ಸಭೆಯಲ್ಲಿ ಯಾವ ಗೊಂದಲವೂ ಆಗಿಲ್ಲ. ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಪ್ರತಿಯೊಬ್ಬ ಸಚಿವರೂ ರಾಜಕೀಯವಾಗಿಯೇ ಉತ್ತರ ನೀಡಬೇಕು. ಅವರ ಹೇಳಿಕೆಗಳನ್ನು ಖಂಡಿಸಬೇಕು ಎಂದು ಸೂಚನೆ ನೀಡಲಾಗಿದೆ. ಅದನ್ನು ಬಿಟ್ಟರೆ ಸಂಪುಟದಲ್ಲಿ ಬೇರೆ ವಿಚಾರ ಚರ್ಚೆಯಾಗಿಲ್ಲ’ ಎಂದೂ ಸಿದ್ದರಾಮಯ್ಯ ಹೇಳಿದರು.
ಸಚಿವರ ತಂಡದ ವರದಿ
ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರು ತಮ್ಮ ಅಭಿಪ್ರಾಯ ಮಂಡಿಸಿದಾಗ ಮಧ್ಯ ಪ್ರವೇಶಿಸಿದ್ದ ಸಿದ್ದರಾಮಯ್ಯ ಅವರು, ಈಗ ವ್ಯಕ್ತವಾಗುತ್ತಿರುವ ಆಕ್ಷೇಪ, ತಕರಾರುಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಮಾಹಿತಿ ನೀಡುವ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವರ ತಂಡಕ್ಕೆ ವಹಿಸಿದ್ದರು.
ಈ ತಂಡದಲ್ಲಿ ಎಚ್.ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ಈಶ್ವರ ಖಂಡ್ರೆ, ಜಮೀರ್ ಅಹಮದ್ ಖಾನ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಇದ್ದರು. ಹಲವು ಸುತ್ತಿನ ಸಭೆ ನಡೆಸಿದ ಈ ಸಚಿವರ ತಂಡ, ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ವಿವರಿಸಿತು. ಹಿಂದೂ ಜಾತಿಯ ಹೆಸರಿನ ಮುಂದೆ ಕ್ರಿಶ್ಚಿಯನ್ ಎಂದು ಉಲ್ಲೇಖಿಸಲು ನೀಡಿರುವ ಅವಕಾಶ ಕೈಬಿಡಬೇಕು; ಸಣ್ಣ ಪುಟ್ಟ ಗೊಂದಲಗಳನ್ನು ಬಗೆಹರಿಸಲು ಆಯೋಗಕ್ಕೆ ಸಲಹೆ ನೀಡಬೇಕು ಎಂದು ಪ್ರತಿಪಾದಿಸಿತು ಎಂದು ಗೊತ್ತಾಗಿದೆ.
‘ಹಿಂದೂ ಕ್ರೈಸ್ತ’ ಉಲ್ಲೇಖ ಕೈಬಿಟ್ಟ ಆಯೋಗ
ಸರ್ಕಾರದ ಸಲಹೆಯನ್ನು ಪರಿಗಣಿಸಿರುವ ಹಿಂದುಳಿದ ವರ್ಗಗಳ ಆಯೋಗ, ಜಾತಿ ಪಟ್ಟಿಯಲ್ಲಿರುವ ‘ಹಿಂದೂ ಕ್ರೈಸ್ತ’ ಎಂಬ ಉಲ್ಲೇಖವನ್ನು ಕೈಬಿಟ್ಟು ಸಮೀಕ್ಷೆ ನಡೆಸಲು ನಿರ್ಧರಿಸಿದೆ.
ಹೊಸದಾಗಿ ಜಾತಿಪಟ್ಟಿ ನೀಡಬೇಕೇ ಅಥವಾ ಮುದ್ರಣಗೊಂಡಿರುವ ಕೈಪಿಡಿಯಲ್ಲಿನ ಪುಟದಲ್ಲಿ ಈ ವಿವರವನ್ನು ಮರೆಮಾಚಬೇಕೇ ಎಂಬ ತೀರ್ಮಾನವನ್ನು ಆಯೋಗ ಮಾಡಲಿದೆ ಎಂದು ಗೊತ್ತಾಗಿದೆ.
ಈ ಬೆನ್ನಲ್ಲೇ, ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷಾ ಕಾರ್ಯಕ್ಕೆ ದಿನಾಂಕ ನಿಗದಿಪಡಿಸಿ ಅನುಮತಿ ನೀಡುವಂತೆ ಕೋರಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿದೆ.
‘ಆಯೋಗದ ವತಿಯಿಂದ ಎಲ್ಲಾ ನಾಗರಿಕರ ಸಮೀಕ್ಷೆಯನ್ನು ಸೆ.22 ರಿಂದ ಅ.7ರವರೆಗೆ ನಡೆಸುವುದಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಪಿಐಎಲ್: 22ಕ್ಕೆ ವಿಚಾರಣೆ
ಜಾತಿವಾರು ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ, ಭಾರತ ಜನಗಣತಿ ಆಯುಕ್ತ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಅಖಿಲ ಭಾರತ ವೀರಶೈವ ಮಹಾಸಭಾ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಹಾಗೂ ಹಿರಿಯ ವಕೀಲ
ಕೆ.ಎನ್.ಸುಬ್ಬಾರೆಡ್ಡಿ ಸಲ್ಲಿಸಿದ್ದ ಅರ್ಜಿಗಳನ್ನು ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು. ಇದೇ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಮುಂದಿನ ವಿಚಾರಣೆ ತನಕ ಸರ್ಕಾರ ಸಮೀಕ್ಷೆ ಕಾರ್ಯಕ್ಕೆ ಮುಂದಾಗದಂತೆ ನಿರ್ದೇಶಿಸಬೇಕು’ ಎಂದು ಕೋರಿದರು.
ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘ಈಗಾಗಲೇ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಸುಮಾರು 1.5 ಕೋಟಿ ಮನೆಗಳ ವಿದ್ಯುತ್ ಮೀಟರ್‌ಗಳಿಗೆ ಸಮೀಕ್ಷೆಯ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರ ಮಧ್ಯಂತರ ಮನವಿಯನ್ನು ಯಥಾಕ್ರಮದಲ್ಲಿ ನಿಯಮಿತ ನ್ಯಾಯಪೀಠವೇ ವಿಚಾರಣೆ ವೇಳೆ ಪರಿಗಣಿಸಲಿದೆ’ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.