ಸ್ಯಾಂಕಿ ಕೆರೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ‘ಕಾವೇರಿ ಆರತಿ’ ನೆರವೇರಿತು.
ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.
ಬೆಂಗಳೂರು: ತೇಲುವ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮದ ಇಂಪು, ವೇದಮಂತ್ರಗಳ ಘೋಷಗಳೊಂದಿಗೆ ಸ್ಯಾಂಕಿ ಕೆರೆಯಲ್ಲಿ ಶುಕ್ರವಾರ ‘ಕಾವೇರಿ ಆರತಿ’ ವೈಭವದಿಂದ ನೆರವೇರಿತು.
‘ವಿಶ್ವ ಜಲದಿನ’ದ ಅಂಗವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಬಾಲಕೃಷ್ಣ, ಶರತ್ ಬಚ್ಚೇಗೌಡ, ಎಚ್.ಡಿ. ರಂಗನಾಥ್, ಎನ್. ಶ್ರೀನಿವಾಸ್, ಎ.ಸಿ. ಶ್ರೀನಿವಾಸ್, ಶಿವಲಿಂಗೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಬಿಎಂಆರ್‌ಡಿಎ ಆಯುಕ್ತ ರಾಜೇಂದ್ರ ಚೋಳನ್, ಬಿಡಬ್ಲ್ಯುಎಸ್ಎಸ್‌ಬಿ ಆಯುಕ್ತ ರಾಮ್ ಪ್ರಸಾತ್ ಮನೋಹರ್, ಉಷಾ ಡಿ.ಕೆ. ಶಿವಕುಮಾರ್ ಸಾಕ್ಷಿಯಾದರು.
ಡಿ.ಕೆ. ಶಿವಕುಮಾರ್ ಮತ್ತು ತಂಡ ಶುಕ್ರವಾರ ಬೆಳಿಗ್ಗೆ ಭಾಗಮಂಡಲದಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿದ ಬಳಿಕ ಸಂಗಮ ಕ್ಷೇತ್ರದಿಂದ ‘ತೀರ್ಥ’ದ ರೂಪದಲ್ಲಿ ಬೆಂಗಳೂರಿಗೆ ನೀರು ತರಲಾಯಿತು. ಪುರೋಹಿತರು ವೇದಮಂತ್ರ ಪಠಿಸಿದರು. ಬಳಿಕ ಆರತಿ ಎತ್ತಿ ನಮನ ಸಲ್ಲಿಸಲಾಯಿತು.
‘ಶನಿವಾರ (ಮಾ.22)ವಿಶ್ವ ಜಲ ದಿನ. ಅದರ ಪ್ರಯುಕ್ತ ಕಾವೇರಿ ಆರತಿ ಕಾರ್ಯಕ್ರಮವನ್ನು ಜಲಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದೆ. ನೀರಿಲ್ಲದೇ ಯಾರೂ ಬದುಕಲು ಸಾಧ್ಯವಿಲ್ಲ. ಅಂಥ ನೀರನ್ನು ಒದಗಿಸುವ ಜಲಮಾತೆಗೆ ಪ್ರಾರ್ಥನೆ ಸಲ್ಲಿಸುವುದು ಎಲ್ಲರ ಕರ್ತವ್ಯ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
‘ನೀರನ್ನು ವಿವಿಧ ವಿಧದಲ್ಲಿ ಬಳಸಿಕೊಳ್ಳುತ್ತೇವೆ. ಸೇವಿಸುವಾಗ ಪಾನ ಎನ್ನುತ್ತೇವೆ. ಅಡುಗೆಗೆ ಬಳಸುವಾಗ ಪಾಕ ಎನ್ನುತ್ತೇವೆ. ಪಾನಕ ಜ್ಯೂಸ್ ಆಗುತ್ತದೆ. ಸ್ನಾನ ಮಾಡಿ ಪಾಪಗಳನ್ನು ತೊಳೆದುಕೊಂಡಾಗ ಪಾವನವಾಗುತ್ತೇವೆ. ನೀರು, ಮಣ್ಣು, ಗಾಳಿಯನ್ನು ವಂಶಪಾರಂಪರ್ಯವಾಗಿ ಉಳಿಸಬೇಕು’ ಎಂದರು.
‘ದೈನಂದಿನ ಚಟುವಟಿಕೆಯಲ್ಲಿ ಮಿತವಾಗಿ ನೀರು ಬಳಸಿ ನೀರು ಉಳಿಸುತ್ತೇನೆ. ಮಳೆ ನೀರಿನ ಸಂಗ್ರಹ ವಿಧಾನವನ್ನು ಅನುಸರಿಸುವ ಮೂಲಕ ಅಂತರ್ಜಲ ಮರುಪೂರಣಕ್ಕೆ ಸಹಕರಿಸುತ್ತೇನೆ. ಜಲಮೂಲಗಳನ್ನು ರಕ್ಷಿಸುವುದಾಗಿ ಮತ್ತು ಭವಿಷ್ಯದ ಪೀಳಿಗೆಗಾಗಿ ಅವುಗಳ ಸಂರಕ್ಷಣೆ ಮಾಡುತ್ತೇನೆ. ನಾನು, ನನ್ನ ಕುಟುಂಬ ಮತ್ತು ಸಮುದಾಯದಲ್ಲಿ ನೀರು ಉಳಿಸುವ ಬಗ್ಗೆ ಜಾಗೃತಿ ಮೂಡಿಸುತ್ತೇನೆ. ಸುಸ್ಥಿರ ಭವಿಷ್ಯದ ನಿರ್ಮಾಣಕ್ಕಾಗಿ ನನ್ನ ಜೀವನದಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಳ್ಳುತ್ತೇನೆ’ ಎಂದು ‘ವಿಶ್ವಜಲ’ ಪ್ರತಿಜ್ಞಾವಿಧಿಯನ್ನು ಜನರು ಸ್ವೀಕರಿಸಿದರು.
ಗಾಯಕಿ ಅನನ್ಯ ಭಟ್ ಹಾಗೂ ಗಾಯಕ ರಘು ದೀಕ್ಷಿತ್ ಅವರ ಸಂಗೀತ ಗಾಯನ, ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮ, ಆಕರ್ಷಕ ವಿದ್ಯುತ್ ದೀಪಗಳ ಬೆಳಕಿನಾಟಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಸ್ಯಾಂಕಿ ಕೆರೆಯಲ್ಲಿ ಪುರೋಹಿತರು ‘ಕಾವೇರಿ ಆರತಿ’ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.