ADVERTISEMENT

ವಿಶ್ವ ಜಲ ದಿನ: ಸ್ಯಾಂಕಿ ಕೆರೆಯಲ್ಲಿ ‘ಕಾವೇರಿ ಆರತಿ’ ಇಂದು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 0:45 IST
Last Updated 21 ಮಾರ್ಚ್ 2025, 0:45 IST
ಕಾವೇರಿ ಆರತಿಯ ಮುನ್ನಾದಿನವಾದ ಗುರುವಾರ ಸಾಂಕ್ಯಿ ಕೆರೆಯಲ್ಲಿ ಅಂತಿಮ ಸಿದ್ಧತೆ ನಡೆಸಲಾಯಿತು
ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್
ಕಾವೇರಿ ಆರತಿಯ ಮುನ್ನಾದಿನವಾದ ಗುರುವಾರ ಸಾಂಕ್ಯಿ ಕೆರೆಯಲ್ಲಿ ಅಂತಿಮ ಸಿದ್ಧತೆ ನಡೆಸಲಾಯಿತು ಪ್ರಜಾವಾಣಿ ಚಿತ್ರ/ಬಿ.ಕೆ. ಜನಾರ್ದನ್   

ಬೆಂಗಳೂರು: ವಿಶ್ವ ಜಲ ದಿನದ ಪ್ರಯುಕ್ತ ಜಲಮಂಡಳಿಯು ಸದಾಶಿವನಗರದಲ್ಲಿರುವ ಸಾಂಕ್ಯಿ ಕೆರೆಯಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ 'ಕಾವೇರಿ ಆರತಿ' ಕಾರ್ಯಕ್ರಮ ಹಮ್ಮಿಕೊಂಡಿದೆ. 

ಇದರ ಸಿದ್ಧತೆಯನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾವೇರಿ ಆರತಿ ಸರ್ಕಾರದ ಕಾರ್ಯಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಲ್ಲ. ಇದಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಜನರು ಈ ಆರತಿಯನ್ನು ಕಣ್ತುಂಬಿಕೊಳ್ಳಬಹುದು’ ಎಂದು ತಿಳಿಸಿದರು.

‘ಬೇಸಿಗೆ ಸಮಯದಲ್ಲಿ ನೀರಿನ ಸಂರಕ್ಷಣೆಯ ಅಭಿಯಾನದ ಜತೆಗೆ, ಬೆಂಗಳೂರು ಹಾಗೂ ರಾಜ್ಯದಲ್ಲಿ ನೀರಿನ ಅಭಾವ ಎದುರಾಗದಿರಲಿ ಎಂದು ಪ್ರಾರ್ಥಿಸುವುದಕ್ಕಾಗಿ ಕಾವೇರಿ ಆರತಿ ಮಾಡಲು ಸರ್ಕಾರ ತೀರ್ಮಾನಿಸಿದೆ’ ಎಂದರು.

ADVERTISEMENT

‘ಬೆಂಗಳೂರಿಗೆ ಕಾವೇರಿ ನೀರು ಆಧಾರ. ಆದ್ದರಿಂದ ಶುಕ್ರವಾರ ಭಾಗಮಂಡಲಕ್ಕೆ ತೆರಳಿ, ಅಲ್ಲಿನ ಸ್ಥಳೀಯ ಶಾಸಕರ ಜತೆಗೆ ತಲಕಾವೇರಿಗೆ ಪೂಜೆ ನೆರವೇರಿಸಲಿದ್ದೇನೆ. ಸಂಜೆ 5 ಗಂಟೆಗೆ ಇಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, 7 ಗಂಟೆ ಬಳಿಕ ಆರತಿ ನಡೆಯಲಿದೆ’ ಎಂದರು.

‘ಬೆಂಗಳೂರಿನ ಇತಿಹಾಸದಲ್ಲಿ ಎಂದೂ ಕಾವೇರಿ ಆರತಿ ನಡೆದಿಲ್ಲ. ಬೆಂಗಳೂರಿನಲ್ಲಿ ಮುಂದೆಂದೂ ನೀರಿಗೆ ತೊಂದರೆಯಾಗ ಬಾರದು, ಅಂತರ್ಜಲ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಂಬಿದ್ದೇವೆ’ ಎಂದು ಹೇಳಿದರು.

‘ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಯಾವುದೇ ಪಾಸ್, ಶುಲ್ಕ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಂಗೀತ ಕಾರ್ಯಕ್ರಮ

‘ಸಂಜೆ 5.30ಕ್ಕೆ ಅನನ್ಯ ಭಟ್ ಹಾಗೂ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮ ಇರಲಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ತೇಲುವ ವೇದಿಕೆ ಸಿದ್ಧಪಡಿಸಲಾಗಿದೆ. ಇದನ್ನು ಮುಂಬೈನಿಂದ ತರಿಸಲಾಗಿದೆ. ಎರಡು ತಂಡಗಳು ಸುಮಾರು 50 ನಿಮಿಷಗಳು ವಿಜೃಂಭಣೆಯಿಂದ ಕಾವೇರಿ ಆರತಿ ನಡೆಸಲಿವೆ. ಇದರ ಜತೆಗೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ನಿರ್ಬಂಧಕ್ಕೆ ಹೈಕೋರ್ಟ್‌ ನಕಾರ

ಸ್ಯಾಂಕಿ ಕೆರೆಯ ಬಫರ್‌ ವಲಯದಲ್ಲಿ ಇದೇ 21ಕ್ಕೆ ಆಯೋಜಿಸಲಾ ಗಿರುವ ಕಾವೇರಿ ಆರತಿ ಕಾರ್ಯಕ್ರಮ ನಡೆಸಲು ಹೈಕೋರ್ಟ್‌, ಬೆಂಗಳೂರು ಜಲಮಂಡಳಿಗೆ ಷರತ್ತುಬದ್ಧ ಅನುಮತಿ ನೀಡಿದೆ.

‘ಕಾವೇರಿ ಆರತಿ’ ಆಕ್ಷೇಪಿಸಿ ಹೈಕೋರ್ಟ್‌ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಯ ನಿಯಮಗಳು ಉಲ್ಲಂಘನೆಯಾಗದಂತೆ ಕಾವೇರಿ ಆರತಿ ಕಾರ್ಯಕ್ರಮ ನಡೆಸಬೇಕು. ಕಾನೂನು ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು’ ಎಂದು ರಾಜ್ಯ ಸರ್ಕಾರ ಮತ್ತು ಜಲಮಂಡಳಿಗೆ ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.