ADVERTISEMENT

ಕಾವೇರಿ ಕೂಗು ಸರ್ಕಾರದ ಯೋಜನೆಯೇ: ಹೈಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 21:02 IST
Last Updated 7 ಡಿಸೆಂಬರ್ 2020, 21:02 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕಾವೇರಿ ಕೂಗು ಯೋಜನೆ ರಾಜ್ಯ ಸರ್ಕಾರದ ಯೋಜನೆಯೋ ಅಥವಾ ಇಲ್ಲವೋ ಎಂಬುದನ್ನು ಎರಡು ದಿನಗಳಲ್ಲಿ ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ತಿಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಇದೊಂದು ಸರ್ಕಾರಿ ಯೋಜನೆಯೆಂದು ಖಾಸಗಿ ಸಂಸ್ಥೆ ಬಿಂಬಿಸುತ್ತಿದೆ. ಹೀಗಾಗಿ, ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ತಿಳಿಸಿತು.

‘ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರ ಕೃಷಿ ಅರಣ್ಯ ಯೋಜನೆ ರೂಪಿಸಿದೆ. ಎನ್‌ಜಿಒ ಮತ್ತು ಸಮಾನ ಮನಸ್ಕ ಸಂಘಟನೆಗಳನ್ನು ಒಳಗೊಳ್ಳಲು ಸರ್ಕಾರ ಹಣ ಒದಗಿಸಿದೆ’ ಎಂದು ಅಮಿಕಸ್ ಕ್ಯೂರಿ ವಿವರಿಸಿದರು.

ADVERTISEMENT

‘ಕಾವೇರಿ ಕೂಗು ಯೋಜನೆಯ ಈಶ ಔಟ್‌ರಿಚ್ ಸಂಸ್ಥೆಗೆ ಸೇರಿದ್ದು, ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿಲ್ಲ ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲು ಸರ್ಕಾರ ಸಿದ್ಧವಿದೆಯೇ’ ಎಂದು ಸರ್ಕಾರದ ವಕೀಲರನ್ನು ಪೀಠ ಮೌಖಿಕವಾಗಿ ಪ್ರಶ್ನಿಸಿತು.

ಈಶ ಫೌಂಡೇಷನ್‌ ವಿವರವಾದ ಯೋಜನಾ ವರದಿಯೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಅದನ್ನು ಅನುಮೊದಿಸಿಲ್ಲ ಎಂದು ಈ ಹಿಂದಿನ ವಿಚಾರಣೆ ವೇಳೆ ಸರ್ಕಾರ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.