ADVERTISEMENT

‘ಕಾವೇರಿ’ ಹೊಸ ಸಂಪರ್ಕ: ಏಪ್ರಿಲ್ 1ರಿಂದ ಇಎಂಐ ಸೌಲಭ್ಯ

ಪ್ರಿಲ್ 1ರಿಂದ ಜಾರಿಗೊಳಿಸಲು ಜಲಮಂಡಳಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 0:15 IST
Last Updated 27 ಮಾರ್ಚ್ 2025, 0:15 IST
ಜಲಮಂಡಳಿ ಲೋಗೊ
ಜಲಮಂಡಳಿ ಲೋಗೊ   

ಬೆಂಗಳೂರು: ಕಾವೇರಿ ನೀರಿನ ಹೊಸ ಸಂಪರ್ಕದ ‘ಪ್ರೊರೇಟಾ’ ಶುಲ್ಕವನ್ನು  ಏಪ್ರಿಲ್‌ 1 ರಿಂದ ಕಂತುಗಳಲ್ಲಿ (ಇಎಂಐ) ಪಾವತಿಸಲು ಬೆಂಗಳೂರು ಜಲಮಂಡಳಿ ಅವಕಾಶ ಮಾಡಿಕೊಡಲಿದೆ.

'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇತ್ತೀಚಿನ ಸಭೆಯಲ್ಲಿ ಠೇವಣಿ ಪಾವತಿಗೆ ಕಂತುಗಳ ಸೌಲಭ್ಯ ಕಲ್ಪಿಸಲು ಅನುಮೋದನೆ ನೀಡಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರೊರೇಟಾ ಶುಲ್ಕ ದುಬಾರಿ ಎಂಬ ಕಾರಣದಿಂದ ಹಲವು ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಅನೇಕರು ಕಾವೇರಿ 5ನೇ ಹಂತದ ಯೋಜನೆಯಡಿ ಹೊಸದಾಗಿ ನೀರಿನ ಸಂಪರ್ಕ ಪಡೆಯಲು ಮುಂದೆ ಬರುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಮಂಡಳಿಯು ಇಎಂಐ ಆಯ್ಕೆಯನ್ನು ಪರಿಚಯಿಸುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಎಷ್ಟು ಕಂತುಗಳು :

‘ಪ್ರೊರೇಟಾ ಶುಲ್ಕವನ್ನು 12 ಕಂತುಗಳಲ್ಲಿ ಪಾವತಿಸುವುದಕ್ಕೆ ಅವಕಾಶ ನೀಡಲು ಮಂಡಳಿಯ ಸಭೆ ಒಪ್ಪಿಗೆ ನೀಡಿದೆ. ನಿವಾಸಿಗಳು ಶುಲ್ಕದ ಶೇ 20ರಷ್ಟನ್ನು ಮುಂಗಡವಾಗಿ ಪಾವತಿಸಬೇಕು. ಆಗ ನೀರಿನ ಸಂಪರ್ಕ ನೀಡಲಾಗುತ್ತದೆ. ಉಳಿದ ಶೇ 80ರಷ್ಟನ್ನು 12 ಮಾಸಿಕ ಕಂತುಗಳಲ್ಲಿ ಪಾವತಿಸಬಹುದು’ ಎಂದು ರಾಮ್‌ಪ್ರಸಾತ್ ವಿವರಿಸಿದರು.

ಕಾವೇರಿ 5ನೇ ಹಂತಕ್ಕೆ ಚಾಲನೆ ನೀಡಿದ ನಂತರ ಹೊಸದಾಗಿ ನೀರಿನ ಸಂಪರ್ಕ ಪಡೆಯುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಜಲಮಂಡಳಿ ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು. ‘ಕಾವೇರಿ ಸಂಪರ್ಕ ಅಭಿಯಾನ’ ನಡೆಸಿ ಮನೆ ಮನೆಗೆ ಅರ್ಜಿಗಳನ್ನು ವಿತರಿಸಿತು. ಇಷ್ಟೆಲ್ಲ ಪ್ರಯತ್ನಗಳ ನಡುವೆ, ಒಂದು ಲಕ್ಷ ನೀರಿನ ಸಂಪರ್ಕ ನೀಡುವ ಗುರಿ ಇಟ್ಟುಕೊಂಡಿದ್ದ ಜಲಮಂಡಳಿಗೆ ಕೇವಲ 33 ಸಾವಿರ ಸಂಪರ್ಕ ನೀಡಲು ಸಾಧ್ಯವಾಗಿದೆ.

ಈ ಅಭಿಯಾನದ ಭಾಗವಾಗಿ ನಡೆದ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಭೆಗಳಲ್ಲಿ,  ‘ಪ್ರೊರೇಟಾ’ ಶುಲ್ಕ ಹೆಚ್ಚಾಗಿದ್ದು, ಅದನ್ನು ಪಾವತಿಸಲು ಇಎಂಐ ಸೌಲಭ್ಯ ಕಲ್ಪಿಸುವಂತೆ ನಿವಾಸಿಗಳು ಬೇಡಿಕೆ ಸಲ್ಲಿಸಿದ್ದರು. ಬೇಡಿಕೆಯನ್ನು ಪರಿಶೀಲಿಸುವುದಾಗಿ ರಾಮ್‌ಪ್ರಸಾತ್ ಭರವಸೆ ನೀಡಿದ್ದರು.

‘ಪ್ರೊರೇಟಾ’ ಶುಲ್ಕ

  2020ರ ಮಾರ್ಚ್‌ನಲ್ಲಿ ಕಾವೇರಿ ನೀರು ಸಂಪರ್ಕದ ಪ್ರೊರೇಟಾ ಶುಲ್ಕ ಪರಿಷ್ಕರಿಸುವ ಮೂಲಕ ಚದರ ಅಡಿಗೆ ₹250 ಇದ್ದ ಮೊತ್ತವನ್ನು ₹400 ಏರಿಕೆ ಮಾಡಲಾಗಿತ್ತು. ಅಲ್ಲದೆ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಸ್ಕರಣಾ ಘಟಕ ಸೇರಿಸಿದರೆ ಈ ವೆಚ್ಚ ಶೇ 62ರಷ್ಟು ಏರಿಕೆಯಾಗಿತ್ತು. ಇದರಿಂದ ಒಂದೊಂದು ಮನೆಗೆ ಕಾವೇರಿ ನೀರಿನ ಸಂಪರ್ಕ ಪಡೆಯಲು ₹ 1.2 ಲಕ್ಷ ವೆಚ್ಚವಾಗುತ್ತದೆ. ಇನ್ನು 500 ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ಗೆ ₹3.6 ಕೋಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ ಮಾಲೀಕರು ಇಎಂಐ ಸೌಲಭ್ಯಕ್ಕೆ ಬೇಡಿಕೆ ಇಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.