ಸಾಂದರ್ಭಿಕ ಚಿತ್ರ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆ.26ರಂದು ಕಾವೇರಿ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿವೆ.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಬಂದ್ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಬಂದ್‌ಗೆ ರೈತ ಸಂಘಟನೆಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ನವನಿರ್ಮಾಣ ಸೇನೆ ಬೆಂಬಲ ಘೋಷಿಸಿವೆ. ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣ ಸೇರಿದಂತೆ ಹಲವು ಕನ್ನಡ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿಲ್ಲ.
ಸಿನಿಮಾ ಉದ್ಯಮ, ಐಟಿ-ಬಿಟಿ ಕಂಪನಿಯ ಉದ್ಯೋಗಿಗಳು, ವಿದ್ಯಾಸಂಸ್ಥೆಗಳು, ಅಪಾರ್ಟ್‌ಮೆಂಟ್ ಸಂಘ ಸಂಸ್ಥೆಗಳು, ಖಾಸಗಿ ಕಾರ್ಖಾನೆಗಳು, ಹೋಟೆಲ್ ಉದ್ದಿಮೆದಾರರು, ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸುವಂತೆ ಪ್ರತಿಭಟನಾಕಾರರು ಕೋರಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಅಂದು ಬೆಳಿಗ್ಗೆ 11ಕ್ಕೆ ಪುರಭವನದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದು ಸಂಘ–ಸಂಸ್ಥೆಗಳ ಬಂದ್ ಅಲ್ಲ. ಎಲ್ಲ ಜನ ಸಾಮಾನ್ಯರ ಪರವಾದ ಬಂದ್. ಕಾವೇರಿ ನೀರು ಕುಡಿಯುವ ಪ್ರತಿಯೊಬ್ಬರೂ ಬೆಂಬಲ ನೀಡುವಂತೆ ಕೋರಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ಸರ್ಕಾರದ ಬೇಜವಾಬ್ದಾರಿಯಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆಗೆ ಪಾದಯಾತ್ರೆ ನಡೆಸಿದ್ದರು. ಅಧಿಕಾರ ಸಿಕ್ಕಿದ ಮೇಲೆ ಮೌನ ವಹಿಸಿದ್ಧಾರೆ ಎಂದು ಕಿಡಿಕಾರಿದರು.
‘ತಮಿಳುನಾಡಿಗೆ ಕಾವೇರಿ ನೀರು ಹರಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ‘ಅಖಂಡ ಕರ್ನಾಟಕ ಬಂದ್’ ಮಾಡಲು ಇದೇ 25ರಂದು ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.