ADVERTISEMENT

ವರದಿ ಫಲಶ್ರುತಿ | ‘ಮಿಸ್ಸಿಂಕ್ ಲಿಂಕ್’ ದುರಸ್ತಿ: ನೀರು ಪೂರೈಕೆ ಸರಾಗ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 15:46 IST
Last Updated 16 ಜುಲೈ 2025, 15:46 IST
ಹೊರಮಾವು ಸಮೀಪದ ಬಡಾವಣೆಯೊಂದರಲ್ಲಿ ಸಂಪರ್ಕ ತಪ್ಪಿರುವ ಕಾವೇರಿ ನೀರು ಪೂರೈಕೆ ಕೊಳವೆಗಳನ್ನು ಜೋಡಿಸಿರುವುದು
ಹೊರಮಾವು ಸಮೀಪದ ಬಡಾವಣೆಯೊಂದರಲ್ಲಿ ಸಂಪರ್ಕ ತಪ್ಪಿರುವ ಕಾವೇರಿ ನೀರು ಪೂರೈಕೆ ಕೊಳವೆಗಳನ್ನು ಜೋಡಿಸಿರುವುದು   

ಬೆಂಗಳೂರು: ‘ಹೊರಮಾವು ವ್ಯಾಪ್ತಿಯ ಕೆಲ ಬಡಾವಣೆಗಳಲ್ಲಿ ಕಾವೇರಿ ನೀರು ಸರಬರಾಜಾಗುವ ಮುಖ್ಯ ಕೊಳವೆ ಮತ್ತು ಮನೆಗೆ ಪೂರೈಸುವ ಕೊಳವೆಗಳ ನಡುವಿನ ಸಂಪರ್ಕಗಳು ತಪ್ಪಿಹೋಗಿದ್ದು (ಮಿಸ್ಸಿಂಗ್ ಲಿಂಕ್ಸ್‌), ಅವುಗಳನ್ನು ಗುರುತಿಸಿ, ಸರಿಪಡಿಸುವ ಮೂಲಕ ಸಮರ್ಪಕವಾಗಿ ನೀರು ಪೂರೈಸುತ್ತಿದ್ದೇವೆ’ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಕೆರೆ, ಬಂಜಾರ ಬಡಾವಣೆ, ಪುಣ್ಯಭೂಮಿ ಬಡಾವಣೆಯ ಕೆಲವು ಮನೆಗಳಿಗೆ ಅಸಮರ್ಪಕ ನೀರು ಪೂರೈಕೆ ಕುರಿತು ‘ಪ್ರಜಾವಾಣಿ’ಯ ಜುಲೈ 14ರ ಸಂಚಿಕೆಯಲ್ಲಿ ‘ವಾರಕ್ಕೊಮ್ಮೆಯೂ ಬಾರದ ಕಾವೇರಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿ ತಕ್ಷಣ ಕಾರ್ಯಪ್ರವೃತ್ತರಾಗಿರುವ ಜಲಮಂಡಳಿ ಅಧಿಕಾರಿಗಳು, ಕೆಲವು ಕಡೆ ಸಮಸ್ಯೆಯನ್ನು ಪರಿಹರಿಸಿದ್ದಾರೆ.

ಕಾವೇರಿ ನೀರು 5ನೇ ಹಂತದ ನೀರು ಪೂರೈಕೆ ಆರಂಭವಾಗುವ ಏಳೆಂಟು ವರ್ಷಗಳ ಹಿಂದೆ 110 ಹಳ್ಳಿಗಳಿಗಳಲ್ಲಿ ಮುಖ್ಯ ಕೊಳವೆಗಳ ಜೋಡಣೆ ಕಾರ್ಯ ನಡೆದಿದೆ. ಇದಾದ ನಂತರ ಹಳ್ಳಿಗಳ ಕೆಲ ಬಡಾವಣೆಗಳಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆ ವೇಳೆ ಕೆಲವು ಮನೆಗಳಿಗೆ ನೀರು ಸರಬರಾಜು ಮಾಡುವ ಕೊಳವೆಗಳ ಸಂಪರ್ಕ (ಮಿಸ್ಸಿಂಗ್ ಲಿಂಕ್) ತಪ್ಪಿರಬಹುದು. ಈಗ ನೀರು ಪೂರೈಕೆ ಆರಂಭಿಸಿದಾಗ ಅಂಥ ಮನೆಗಳು ಯಾವುವು ಎಂದು ಗೊತ್ತಾಗುತ್ತಿದೆ. ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿರುವ ಮನೆಗಳನ್ನು ಗುರುತಿಸಿ ಸರಿಪಡಿಸಲಾಗುತ್ತಿದೆ. ಈ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತದೆ’ ಎಂದು ಜಲಮಂಡಳಿಯ ಪೂರ್ವ ವಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬಂಜಾರ ಬಡಾವಣೆ ಹಾಗೂ ಸುತ್ತಮುತ್ತ ಲೇಔಟ್‌ಗಳಿಗೆ ಕಾವೇರಿ ನೀರು ಪೂರೈಸುವ ಮುಖ್ಯ ಕೊಳವೆಯು ಕೆಲವು ಕಡೆ ಒಡೆದು, ನೀರು ಸೋರಿಕೆಯಾಗುತ್ತಿದೆ. ಇದರಿಂದಲೂ ಮನೆಗಳಿಗೆ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಸೋರಿಕೆಯಾಗುತ್ತಿರುವ ಕೊಳವೆಗಳನ್ನು ಸರಿಪಡಿಸಲಾಗುತ್ತಿದೆ. ಹಂತ ಹಂತವಾಗಿ ಸಮಸ್ಯೆ ಬಗೆಹರಿಯಲಿದೆ. ವೇಳಾಪಟ್ಟಿ ನಿಗದಿಪಡಿಸಿ, ವಾರಕ್ಕೆ ಎರಡು ದಿನ ನೀರು ಬಿಡುವ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.