ADVERTISEMENT

ಎಫ್‌ಸಿಐ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ಗೋದಾಮು ಬಾಡಿಗೆಗೆ ಪಡೆದು ₹ 11.76 ಕೋಟಿ ನಷ್ಟ!

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:11 IST
Last Updated 30 ಮೇ 2019, 20:11 IST

ಬೆಂಗಳೂರು: ತಮ್ಮದೇ ಗೋದಾಮು ಇದ್ದಾಗ್ಯೂ, ರಾಜ್ಯ ಉಗ್ರಾಣ ನಿಗಮದ ಗೋದಾಮುಗಳನ್ನು ಬಾಡಿಗೆಗೆ ಪಡೆದು ಸರ್ಕಾರಕ್ಕೆ ₹ 11.76 ಕೋಟಿ ನಷ್ಟ ಮಾಡಿದ ಆರೋಪದ ಮೇಲೆ ಭಾರತ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳಿಬ್ಬರ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಎಫ್‌ಐಆರ್‌ ದಾಖಲಿಸಿದೆ.

ಬೆಂಗಳೂರು ಪ್ರಾದೇಶಿಕ ವ್ಯವಸ್ಥಾಪಕರಾಗಿದ್ದ ನಾಗೇಂದ್ರ ಪ್ರಸಾದ್‌ (ಸದ್ಯ ಆಂಧ್ರದ ಶ್ರೀಕಾಕುಳಂ ಎಫ್‌ಸಿಐ ಎಜಿಎಂ) ಮತ್ತು ಬೆಂಗಳೂರು ವ್ಯವಸ್ಥಾಪಕ ರವಿ ಕುಮಾರ್‌ ಅವರು ಸವಿತಾ ಟ್ರಾನ್ಸ್‌ಪೋರ್ಟ್‌ ಮಾಲೀಕರಾದ ಎಚ್‌.ಆರ್‌. ಕೃಷ್ಣಾರೆಡ್ಡಿ ಅವರ ಜೊತೆಗೂಡಿ ಸಂಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವೈಟ್‌ಫೀಲ್ಡ್‌, ಕೆ.ಆರ್.ಪುರ ಮತ್ತು ಮಾಲೂರುಗಳಲ್ಲಿರುವ ಎಫ್‌ಸಿಐ ಗೋದಾಮುಗಳಲ್ಲಿ 1.62 ಲಕ್ಷ ಟನ್‌ ಆಹಾರ ಧಾನ್ಯ ಸಂಗ್ರಹಿಸಲು ಸ್ಥಳಾವಕಾಶ ಇದ್ದರೂ 2014ರಿಂದ 17ರವರೆಗೆ ಕೆ.ಆರ್‌.‍ಪುರದ ಕೊರಳೂರು ಬಳಿ 30,000 ಟನ್‌ ಧಾನ್ಯ ಸಂಗ್ರಹಿಸಲು ಗೋದಾಮು ಬಾಡಿಗೆಗೆ ಪಡೆದು ವಂಚಿಸಲಾಗಿದೆ ಎಂದೂ ದೂರಲಾಗಿದೆ.

ADVERTISEMENT

ನಾಗೇಂದ್ರ ಪ್ರಸಾದ್‌ ವೈಟ್‌ಫೀಲ್ಡ್‌ನಿಂದ 12 ಕಿ.ಮೀ ದೂರದಲ್ಲಿರುವ ರಾಜ್ಯ ಉಗ್ರಾಣ ನಿಗಮದ ಗೋದಾಮನ್ನು ಬಾಡಿಗೆಗೆ ಪಡೆಯುವಂತೆ ಪ್ರಾದೇಶಿಕ ಕಚೇರಿಗೆ ಶಿಫಾರಸು ಮಾಡಿದ್ದರು. ವೈಟ್‌ಫೀಲ್ಡ್‌ ಹಾಗೂ ಕೆ.ಆರ್‌. ಪುರದಲ್ಲಿರುವ ಗೋದಾಮಿಗೆ ಅಕ್ಕಿ ಹಾಗೂ ಗೋಧಿ ಸಾಗಣೆ ಮಾಡಲು ರೈಲ್ವೆ ಸೌಲಭ್ಯವಿದೆ. ಕೊರಳೂರಿನಲ್ಲಿರುವ ಗೋದಾಮಿಗೆ ರೈಲ್ವೆ ಸೌಲಭ್ಯವಿಲ್ಲ. ಈ ಗೋದಾಮು ಗೂಡ್ಸ್‌ಶೆಡ್‌ನಿಂದ 12 ಕಿ.ಮೀ ದೂರದಲ್ಲಿದೆ.

ಕ್ಷೇತ್ರ ಮಟ್ಟದ ಅಧಿಕಾರಿಗಳಾದ ನಾಗೇಂದ್ರ ಪ್ರಸಾದ್‌ ಹಾಗೂ ರವಿ ಕುಮಾರ್‌ ಎಫ್‌ಸಿಐ ಗೋದಾಮುಗಳಲ್ಲಿ ಆಹಾರ ಧಾನ್ಯ ದಾಸ್ತಾನು ಮಾಡಲು ಇರುವ ಸ್ಥಳಾವಕಾಶದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡದೆ ರಾಜ್ಯ‌ಗೋದಾಮನ್ನು ಬಾಡಿಗೆಗೆ ಪಡೆಯಲು ಶಿಫಾರಸು ಮಾಡುವ ಮೂಲಕ ಲೋಪ ಎಸಗಿದ್ದಾರೆ. ಆಹಾರ ಧಾನ್ಯಗಳ ಸಾಗಣೆಗೆ ಸವಿತಾ ಟ್ರಾನ್ಸ್‌ಪೋರ್ಟ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದಾಗಿ ಗೋದಾಮು ಬಾಡಿಗೆಗೆ ₹ 2.33 ಕೋಟಿ ಹಾಗೂ ಸಾಗಣೆ ವೆಚ್ಚಕ್ಕೆ ₹ 9.43 ಕೋಟಿ ಪಾವತಿಸಲಾಗಿದ್ದು, ಒಟ್ಟು ₹ 11.76 ಕೋಟಿ ನಷ್ಟ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪಿತೂರಿ, ವಂಚನೆ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ, ಆರೋಪಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.