ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಸಿಬಿಐನ ಬೆಂಗಳೂರು ಬ್ಯೂರೊದ ಭ್ರಷ್ಟಾಚಾರ ನಿಯಂತ್ರಣ ಘಟಕದ ಡಿವೈಎಸ್ಪಿ ಬೃಜೇಶ್ ಕುಮಾರ್ ವಿರುದ್ಧ ಸಿಬಿಐ ಪ್ರಧಾನ ಕಚೇರಿಯ ಭ್ರಷ್ಟಾಚಾರ ನಿಯಂತ್ರಣ ಘಟಕ ಭಾನುವಾರ ಎಫ್ಐಆರ್ ದಾಖಲಿಸಿದೆ.
ಬಿಹಾರದ ಪಾಟ್ನಾ ನಿವಾಸಿಯಾದ ಬೃಜೇಶ್ ಕುಮಾರ್, 2008ರಲ್ಲಿ ಸಿಬಿಐ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. 2013ರಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗೆ ಬಡ್ತಿ ಹೊಂದಿದ್ದರು. 2013ರ ಏಪ್ರಿಲ್‌ನಲ್ಲಿ ಡಿವೈಎಸ್ಪಿ ಹುದ್ದೆಗೆ ಬಡ್ತಿ ಹೊಂದಿದ್ದ ಅವರನ್ನು, ಸಿಬಿಐ ಬೆಂಗಳೂರು ಬ್ಯೂರೊದ ಬ್ಯಾಂಕ್ ಭದ್ರತೆ ಮತ್ತು ವಂಚನೆ ತಡೆ ಘಟಕಕ್ಕೆ ನಿಯೋಜಿಸಲಾಗಿತ್ತು. 2020ರ ಜೂನ್ ನಿಂದ ಸಿಬಿಐ ಬೆಂಗಳೂರು ಬ್ಯೂರೊದ ಭ್ರಷ್ಟಾಚಾರ ನಿಯಂತ್ರಣ ಘಟಕದಲ್ಲಿದ್ದಾರೆ.
2018ರ ಸೆಪ್ಟೆಂಬರ್ 1ರಿಂದ 2021ರ ಮೇ 31ರವರೆಗಿನ ಅವಧಿಯಲ್ಲಿ ಬೃಜೇಶ್ ಕುಮಾರ್ ಪಡೆದಿರುವ ವೇತನ ಮತ್ತು ಅಧಿಕೃತ ಆದಾಯ, ಮಾಡಿರುವ ವೆಚ್ಚಗಳಿಗೆ ಹೋಲಿಸಿದರೆ ₹ 1.94 ಕೋಟಿ ಮೌಲ್ಯದ (ಶೇಕಡ 302) ಅಕ್ರಮ ಆಸ್ತಿ ಹೊಂದಿರುವುದು ಕಂಡುಬಂದಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಯಲಹಂಕ ಸಮೀಪದ ಆವಲಹಳ್ಳಿಯ ಪ್ರೆಸ್ಟೀಜ್ ರಾಯಲ್ ಗಾರ್ಡನ್ಸ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ತಂದೆ ಶಿಯೋ ಯೋಗಿ ಸಿಂಗ್ ಹೆಸರಿನಲ್ಲಿ ₹ 96.38 ಲಕ್ಷ ಮೌಲ್ಯದ ಒಂದು ಫ್ಲ್ಯಾಟ್ ಮತ್ತು ತಾಯಿ ಲಲಿತಾ ಸಿಂಗ್ ಹೆಸರಿನಲ್ಲಿ ₹ 95.29 ಲಕ್ಷ ಮೌಲ್ಯದ ಒಂದು ಫ್ಲ್ಯಾಟ್ ಖರೀದಿಸಲಾಗಿದೆ. ಕಮ್ಮನಹಳ್ಳಿ ರಸ್ತೆಯ ಶುಭೋದಯ ಲಾರೆಲ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಪತ್ನಿ ಸ್ವೀಟಿ ಸಿಂಗ್ ಹೆಸರಿಗೆ ಒಂದು ಫ್ಲ್ಯಾಟ್ ಖರೀದಿಸಲಾಗಿದೆ. ಈ ಯಾವುದೇ ಖರೀದಿಗೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿಲ್ಲ ಎಂಬ ಮಾಹಿತಿ ಎಫ್ಐಆರ್ ನಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.