ADVERTISEMENT

ಅಜಿತಾಬ್‌ ಪ್ರಕರಣ ಸಿಬಿಐಗೆ

11 ತಿಂಗಳ ಹಿಂದೆ ನಾಪತ್ತೆಯಾದ ಎಂಜಿನಿಯರ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:44 IST
Last Updated 22 ನವೆಂಬರ್ 2018, 19:44 IST

ಬೆಂಗಳೂರು: ಕಳೆದ 11 ತಿಂಗಳಿಂದಲೂ ನಿಗೂಢವಾಗಿರುವ ಸಾಫ್ಟ್‌ವೇರ್‌ ಉದ್ಯೋಗಿ ಅಜಿತಾಬ್‌ ಕುಮಾರ್‌ ನಾಪತ್ತೆ ಪ್ರಕರಣ ಕುರಿತು ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ವೈಟ್‌ಫೀಲ್ಡ್‌ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಅಜಿತಾಬ್‌ 2017ರ ಡಿಸೆಂಬರ್‌ 18ರಿಂದ ಕಾಣೆಯಾಗಿದ್ದಾರೆ. ಎಂಜಿನಿಯರ್ ಸುಳಿವು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡಕ್ಕೆ ಸಾಧ್ಯವಾಗದ್ದರಿಂದ ಸಿಬಿಐ ತನಿಖೆ ಕೋರಿಅಜಿತಾಬ್‌ ಅವರ ತಂದೆ ಅಶೋಕ್‌ ಕುಮಾರ್‌ ಸಿನ್ಹಾ ಕೋರ್ಟ್‌ ಮೆಟ್ಟಿಲು ಹತ್ತಿದ್ದರು.

ಅಜಿತಾಬ್‌, ತಮ್ಮ ಸಿಯಾಜ್ ಕಾರನ್ನು ಮಾರುತ್ತಿರುವುದಾಗಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು.ಡಿ.18ರಂದು ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಕಾರು ಖರೀದಿಸುವುದಾಗಿ ಅವರಿಗೆ ಹೇಳಿದ್ದ. ಈ ಸಂಬಂಧ ಅದೇ ದಿನ ಸಂಜೆ ಮಾತುಕತೆಗೆ ತೆರಳಿದ್ದ ಅಜಿತಾಬ್ ವಾಪಸ್ ಫ್ಲ್ಯಾಟ್‌ಗೆ ಮರಳಲಿಲ್ಲ.

ADVERTISEMENT

ಯುವಕನ ತಂದೆ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಾಗಿತ್ತು. ಈ ಮೊದಲು ಹೈಕೋರ್ಟ್ ನೀಡಿದ್ದ ಆದೇಶದಂತೆ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು. ಆದರೂ ಪ್ರಕರಣದ ಬಗ್ಗೆ ಯಾವುದೇ ಸುಳಿವೂ ಸಿಕ್ಕಿಲ್ಲ.

1.45 ಲಕ್ಷ ಸಿಡಿಆರ್ ಪರಿಶೀಲನೆ!

‘ಒಎಲ್‌ಎಕ್ಸ್‌ನಲ್ಲಿ ಅಜಿತಾಬ್‌ ನೀಡಿದ್ದ ಜಾಹೀರಾತು ನೋಡಿದ್ದ 252 ಮಂದಿಯ ವಿಚಾರಣೆಯನ್ನು ಪೊಲೀಸರು ನಡೆಸಿದ್ದರು. ಅಷ್ಟೇ ಅಲ್ಲದೆ, ಹಿಂದೆ ಅವರಿಂದ ಐ–20 ಕಾರು ಖರೀದಿಸಿದ್ದ ಮಾಧವ್ ಎಂಬುವರನ್ನೂ ವಿಚಾರಣೆ ಮಾಡಿದ್ದರು.

‌‘ಅಜಿತಾಬ್ ನಾಪತ್ತೆಯಾದ ದಿನ, ಶಂಕಿತ ಆರೋಪಿಯ ಸಿಮ್‌ ಕೋರಮಂಗಲದ ಮಲ್ಲಪ್ಪ ರೆಡ್ಡಿ ಲೇಔಟ್, ಸಿಲ್ಕ್‌ಬೋರ್ಡ್, ಬೇಗೂರು, ಜಯನಗರ, ವರ್ತೂರು, ಗುಂಜೂರು ಸುತ್ತಮುತ್ತಲ ಟವರ್‌ಗಳಿಂದ ಸಂಪರ್ಕ ಪಡೆದಿತ್ತು. ಅಜಿತಾಬ್ ಮೊಬೈಲ್ ಸ್ವಿಚ್ಡ್‌ಆಫ್ ಆಗಿದ್ದೂ ಗುಂಜೂರು ಕೆರೆ ಸಮೀಪವೇ. ಇದನ್ನು ಗಮನಿಸಿದರೆ ಶಂಕಿತ ಆರೋಪಿ ಅಲ್ಲಿಂದಲೇ ಅವರನ್ನು ಅಪಹರಿಸಿರುವುದು
ಸ್ಪಷ್ಟವಾಗುತ್ತದೆ ಎಂದು ಪೊಲೀಸರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.