ADVERTISEMENT

ಸಿಗರೇಟ್‌ ಮಾರಾಟಕ್ಕೆ ಲಂಚ: ತಲೆಮರೆಸಿಕೊಂಡಿರುವ ಸಿಸಿಬಿ ಅಧಿಕಾರಿಗಳು

ಸಿಗರೇಟ್‌ ಮತ್ತು ಮಾಸ್ಕ್‌ ಲಂಚ ಪ್ರಕರಣ: ಎರಡೆರಡು ನೋಟಿಸ್‌ ಜಾರಿಗೊಳಿಸಿದ ಎಸಿಬಿ

​ಪ್ರಜಾವಾಣಿ ವಾರ್ತೆ
Published 27 ಮೇ 2020, 19:07 IST
Last Updated 27 ಮೇ 2020, 19:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಸಿಗರೇಟ್‌ ವಿತರಕರು ಮತ್ತು ನಕಲಿ ಮಾಸ್ಕ್‌ ತಯಾರಿಕರಿಂದ ಲಂಚ ಪಡೆದ ಆರೋಪಕ್ಕೆ ಒಳಗಾಗಿರುವ ಸಿಸಿಬಿ ಎಸಿಪಿ ಪ್ರಭುಶಂಕರ್‌, ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಮತ್ತು ನಿರಂಜನ ಕುಮಾರ್‌ ತಲೆಮರೆಸಿಕೊಂಡಿದ್ದು, ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ವಿಚಾರಣೆಗೆ ಬರುವಂತೆ ಎರಡೆರಡು ನೋಟಿಸ್‌ ಜಾರಿಗೊಳಿಸಿದೆ.

ಈ ಅಧಿಕಾರಿಗಳ ವಿರುದ್ಧ ಎಸಿಬಿ ಗುರುವಾರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ, ಶುಕ್ರವಾರ ಬೆಳಿಗ್ಗೆ ಮನೆಗಳ ಮೇಲೆ ದಾಳಿ ಮಾಡಿತ್ತು. ಸಿಗರೇಟ್‌ ವಿತರಕರಾದ ಆದಿಲ್‌ ಅಜೀಜ್‌, ಮಧ್ಯವರ್ತಿಗಳಾದ ಭೂಷಣ್‌ ಮತ್ತು ಬಾಬು ರಾಜೇಂದ್ರ ಪ್ರಸಾದ್‌ ಅವರ ಮನೆಯನ್ನೂ ಶೋಧಿಸಲಾಗಿತ್ತು.

‘ಎಫ್ಐಆರ್‌ ದಾಖಲಾಗುತ್ತಿದ್ದಂತೆ ಪೊಲೀಸ್‌ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಭೂಷಣ್‌ ಮತ್ತು ಪ್ರಸಾದ್‌ ಅವರನ್ನೂ ಬಚ್ಚಿಡಲಾಗಿದೆ. ಇವೆರಡೂ ಪ್ರಕರಣಗಳಲ್ಲಿ ವಿಚಾರಣೆಗೆ ಬರುವಂತೆ ಆರಂಭದಲ್ಲೇ ನೋಟಿಸ್‌ ನೀಡಲಾಗಿತ್ತು. ಮಂಗಳವಾರ ಮತ್ತೊಂದು ನೋಟಿಸ್‌ ಕಳುಹಿಸಲಾಗಿದೆ’ ಎಂದು ಎಸಿಬಿ ಉನ್ನತ ಮೂಲಗಳು ತಿಳಿಸಿವೆ.

ADVERTISEMENT

‘ದಾಳಿ ವೇಳೆ ಪ್ರಭುಶಂಕರ್‌ ಮನೆಯಲ್ಲಿ ಡೈರಿಯೊಂದು ಸಿಕ್ಕಿದೆ. ಅದರಲ್ಲಿ ಆಸ್ತಿಪಾಸ್ತಿಗೆ ಸಂಬಂಧಿಸಿದ ಪ್ರಸ್ತಾಪವಿದೆ. ಕೆಲವರ ಹೆಸರುಗಳೂ ಇವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೇನಾಮಿ ಆಸ್ತಿಪಾಸ್ತಿಗೆ ಸಂಬಂಧಿಸಿದ ವಿವರಗಳು ಪತ್ತೆಯಾದರೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಜತೆ ಹಂಚಿಕೊಳ್ಳಲಾಗುವುದು’ ಎಂದೂ ಮೂಲಗಳು ಹೇಳಿವೆ.

ಸಿಗರೇಟ್‌ ವಿತರಕರಿಂದ ಪ್ರತ್ಯೇಕವಾಗಿ ₹ 85 ಲಕ್ಷ ಹಾಗೂ ನಕಲಿ ಎನ್‌– 95 ಮಾಸ್ಕ್‌ ತಯಾರಕರಿಂದ ₹ 15 ಲಕ್ಷ ಲಂಚ ಪಡೆದ ಆರೋಪ ಮೂವರು ಅಧಿಕಾರಿಗಳ ಮೇಲಿದೆ. ಭೂಷಣ್‌ ಮತ್ತು ಬಾಬು ಲಂಚ ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದಾರೆ ಎಂದೂ ಎಸಿಬಿ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.