ADVERTISEMENT

ಎಣ್ಣೆ ಪಾರ್ಟಿ ಗೊತ್ತು, ಡ್ರಗ್ಸ್ ಪಾರ್ಟಿ ಗೊತ್ತಿಲ್ಲ: ರಮೇಶ್ ಡೆಂಬ್ಲ

ಜನಪ್ರಿಯ ನಟರ ಹೆಸರು ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 22:04 IST
Last Updated 26 ಸೆಪ್ಟೆಂಬರ್ 2020, 22:04 IST
ರಮೇಶ್ ಡೆಂಬ್ಲ
ರಮೇಶ್ ಡೆಂಬ್ಲ   

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಚುರುಕು ಗೊಳಿಸಿರುವ ನಗರದ ಸಿಸಿಬಿ ಪೊಲೀಸರು, ವಸ್ತ್ರ ವಿನ್ಯಾಸಕ ರಮೇಶ್ ಡೆಂಬ್ಲ ಅವರನ್ನು ಶನಿವಾರ ಬೆಳಿಗ್ಗೆ ಯಿಂದ ತಡರಾತ್ರಿವರೆಗೂ ವಿಚಾರಣೆಗೆ ಒಳಪಡಿಸಿದರು.

ಪ್ರಕರಣದ ಆರೋಪಿಗಳ ಜೊತೆ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮಾಹಿತಿ ಮೇರೆಗೆ ರಮೇಶ್‌ಗೆ ಶುಕ್ರವಾರ ವಷ್ಟೇ ನೋಟಿಸ್ ನೀಡಿದ್ದರು. ಸಿಸಿಬಿ ಕಚೇರಿಗೆ ಶನಿವಾರ ಬೆಳಿಗ್ಗೆ 10.30ಕ್ಕೆ ಬಂದ ರಮೇಶ್ ಅವರಿಂದ ಸಿಸಿಬಿಯ ಇಬ್ಬರು ಇನ್‌ಸ್ಪೆಕ್ಟರ್‌ಗಳು ಹೇಳಿಕೆ ಪಡೆದುಕೊಂಡರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಾನು ಹೆಸರು ಮಾಡಿದ್ದೇನೆ. ಸ್ಯಾಂಡಲ್‌ ವುಡ್ ಹಾಗೂ ಬಾಲಿವುಡ್‌ನ ಹಲವು ನಟ–ನಟಿಯರು ನನಗೆ ಆತ್ಮೀಯರು. ಕನ್ನಡದ ಕೆಲ ಜನಪ್ರಿಯ ನಟರು, ಆಗಾಗ ನನ್ನ ಮನೆಗೂ ಬಂದು ಹೋಗುತ್ತಾರೆ. ಅವರೆಲ್ಲರ ಜೊತೆ ನಾನು ಎಣ್ಣೆ ಪಾರ್ಟಿ ಮಾಡಿದ್ದೇನೆ. ಆದರೆ, ಇದುವರೆಗೂ ಯಾವುದೇ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿಲ್ಲ. ಡ್ರಗ್ಸ್ ಅಭ್ಯಾಸ ನನಗಿಲ್ಲ. ನಾನು ಭಾಗವಹಿಸಿದ್ದ ಪಾರ್ಟಿಗಳಲ್ಲಿ ತೆರೆ ಮರೆಯಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಬಗ್ಗೆಯೂ ನನಗೆ ಮಾಹಿತಿ ಇಲ್ಲ’ ಎಂದು ರಮೇಶ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ADVERTISEMENT

‘ನನ್ನದೇ ವಸ್ತ್ರವಿನ್ಯಾಸದ ಸಂಸ್ಥೆ ಇದೆ. ಬೆಂಗಳೂರು ಫ್ಯಾಷನ್ ಶೋ ಸೇರಿ ದಂತೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತೇನೆ. ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಹಲವರು ನನಗೆ ಪರಿಚಯ. ಆದರೆ, ಡ್ರಗ್ಸ್ ಬಗ್ಗೆ ನನ್ನ ಬಳಿ ಯಾವುದೇ ಮಾಹಿತಿ ಇಲ್ಲ’ ಎಂದೂ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಅಸಹಕಾರ: ಸಿಸಿಬಿ ಕಚೇರಿಗೆ ಬಂದ ಕೂಡಲೇ ಪೊಲೀಸ್ ಅಧಿಕಾರಿ ಬಳಿ ರಮೇಶ್, ‘ನನಗೆ ಏಕೆ ನೋಟಿಸ್ ನೀಡಿದ್ದೀರಾ. ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ವಾದಿಸಿದ್ದರು. ಅಧಿಕಾರಿ, ‘ಪುರಾವೆಗಳು ಇದ್ದಿದ್ದಕ್ಕೆ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಸಹಕರಿಸಿ’ ಎಂದು ಕೋರಿದರು. ಬಳಿಕವೇ ವಿಚಾರಣೆ ಆರಂಭವಾಯಿತು.

ಮೊಬೈಲ್ ನೀಡುವಂತೆ ಹೇಳುತ್ತಿ ದ್ದಂತೆ ಮತ್ತೆ ವಾದಕ್ಕೆ ಇಳಿದ ರಮೇಶ್‌ಗೆ, ‘ತನಿಖೆಗೆ ಸಹಕರಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ತಾಕೀತು ಮಾಡಿದರು. ನಂತರವೇ ಮೊಬೈಲ್ ಕೊಟ್ಟ ರಮೇಶ್, ಪಾಸ್‌ವರ್ಡ್ ತಿಳಿಸಲು ಸಹ ಸತಾಯಿಸಿದರು ಎಂಬುದಾಗಿಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.