ADVERTISEMENT

ಮಧುಮೇಹ ಔಷಧಕ್ಕೆ ₹ 5 ಲಕ್ಷ ಪಡೆದು ವಂಚನೆ

ನಕಲಿ ಔಷಧಿ ಮಾರುತ್ತಿದ್ದ ಗೋಕಾಕ್‌ ಗ್ಯಾಂಗ್‌ ಸಿಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 20:00 IST
Last Updated 5 ಅಕ್ಟೋಬರ್ 2019, 20:00 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ನಕಲಿ ಆಯುರ್ವೇದ ಔಷಧಿಗಳನ್ನು ನೀಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿ ಸಿಕ್ಕಿಬಿದ್ದಿರುವ ಗೋಕಾಕ್‌ನ ನಾಲ್ವರು ಆರೋಪಿಗಳು, ಮಧುಮೇಹ ಔಷಧಕ್ಕೆ ₹ 5 ಲಕ್ಷ ಹಾಗೂ ಸೊಂಟ ನೋವಿಗೆ ₹ 1.5 ಲಕ್ಷ ಪಡೆಯುತ್ತಿದ್ದರು ಎಂಬ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಮಧುಮೇಹ ನಿವಾರಣೆ ಹಾಗೂ ಲೈಂಗಿಕ ಶಕ್ತಿ ವೃದ್ಧಿ ಹೆಸರಿನಲ್ಲಿ ನಕಲಿ ಔಷಧಿ ನೀಡಿ ವಂಚಿಸಿದ್ದ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಹಲವು ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ.

‘ಗೋಕಾಕ್‌ನಿಂದ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಇಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸವಿರುತ್ತಿದ್ದರು. ವಾಯುವಿಹಾರಕ್ಕೆ ಬರುತ್ತಿದ್ದ ವೃದ್ಧರನ್ನು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿಗಳು, ತಮ್ಮ ‘ಸಿದ್ಧಿ ಆಯುರ್ವೇದಿಕ್ ಮೆಡಿಸನ್’ ಕಚೇರಿಗೆ ಕರೆಸಿಕೊಂಡು ಔಷಧಿ ಮಾರಾಟ ಮಾಡುತ್ತಿದ್ದರು. ಔಷಧಿ ಪಡೆದಿದ್ದ ವಿಲ್ಸನ್‌ ಗಾರ್ಡನ್ ನಿವಾಸಿಯೊಬ್ಬರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ. ಅವರೇ ಆರೋಪಿಗಳ ವಿರುದ್ಧ ದೂರು ನೀಡಿದ್ದರು’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.’

ADVERTISEMENT

‘ಪ್ರಕರಣದ ಆರೋಪಿಗಳಾದ ದೀಪಕ್ (31), ವಿರೂಪಾಕ್ಷಪ್ಪ (40), ಸಂತೋಷ್ ಹುಕ್ಕೇರಿ (30) ಹಾಗೂ ವಿನಾಯಕ್ (27) ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ರಾಮಮೂರ್ತಿ ಅಲಿಯಾಸ್ ವೆಂಕಟೇಶ್ ತಲೆಮರೆಸಿಕೊಂಡಿದ್ದಾನೆ’ ಎಂದರು.

‘ಆರೋಪಿಗಳಿಂದ ₹ 6.40 ಲಕ್ಷ ನಗದು, ಐದು ಮೊಬೈಲ್ ಹಾಗೂ ಗ್ರಾಹಕರಿಂದ ಪಡೆದಿದ್ದ ಎಂಟು ಚೆಕ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.