ADVERTISEMENT

ಹನಿಟ್ರ್ಯಾಪ್: ಐವರು ಬಂಧನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 20:50 IST
Last Updated 16 ಡಿಸೆಂಬರ್ 2023, 20:50 IST
 ಬಂಧನ
ಬಂಧನ   

ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ದೋಚಲು ಮುಂದಾಗಿದ್ದ ದಂಪತಿ ಸೇರಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಲ್ಲಾಳು ಬಳಿಯ ಚಿಕ್ಕಬಸ್ತಿಯ ನಿವಾಸಿ ಕಲೀಂ ಅಹ್ಮದ್ (42), ಅವರ ಪತ್ನಿ ಶಬಾ ಅಪ್ಸಾನಾ (32), ಪಾದರಾಯನಪುರದ ಉಬೇದ್ ಖಾನ್ (32), ಬಿಟಿಎಂ ಬಡಾವಣೆಯ ಅಬ್ದುಲ್ ರಕೀಬ್ ಜಫಾರಿ (45) ಹಾಗೂ ಚಿಕ್ಕ ಬಾಣಾವರದ ಶೇಖ್ ಅತೀಕ್ ಉರ್ ರೆಹಮಾನ್ (33) ಬಂಧಿತರು.

‘ಶಬಾ ಅಪ್ಸಾನಾ ಅವರನ್ನು ಬಳಸಿಕೊಂಡು ಉದ್ಯಮಿಯನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 6 ಲಕ್ಷಕ್ಕೆ ಬೇಡಿಕೆ ಇರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಡಿ. 14ರಂದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ವಿಧವೆ ಎಂಬುದಾಗಿ ಪರಿಚಯ: ‘ಸಂತ್ರಸ್ತ ಉದ್ಯಮಿಯನ್ನು ಆರೋಪಿ ಕಲೀಂ ಅಹ್ಮದ್ ಪರಿಚಯ ಮಾಡಿಕೊಂಡಿದ್ದ. ಹಣವಿರುವುದನ್ನು ತಿಳಿದು ದೋಚಲು ಸಂಚು ರೂಪಿಸಿದ್ದ. ಪತ್ನಿ ಶಬಾ ಅಪ್ಸಾನಾ ಅವರನ್ನು ಉದ್ಯಮಿ ಬಳಿ ಕರೆದೊಯ್ದಿದ್ದ ಆತ, ‘ಇವರು ವಿಧವೆ. ಕೆಲಸ ನೀಡಿ ಜೀವನಕ್ಕೆ ದಾರಿ ಮಾಡಿಕೊಡಿ’ ಎಂಬುದಾಗಿ ವಿನಂತಿಸಿದ್ದ. ಅದಕ್ಕೆ ಉದ್ಯಮಿ ಒಪ್ಪಿದ್ದರು.’

‘ಉದ್ಯಮಿ ಜೊತೆ ಸಲುಗೆಯಿಂದ ವರ್ತಿಸಲಾರಂಭಿಸಿದ್ದ ಶಬಾ, ಹಲವು ಬಾರಿ ಖಾಸಗಿ ಕ್ಷಣ ಕಳೆದಿದ್ದರು. ಡಿ. 14ರಂದು ಉದ್ಯಮಿಗೆ ಕರೆ ಮಾಡಿದ್ದ ಮಹಿಳೆ, ‘ವಸತಿಗೃಹಕ್ಕೆ ಹೋಗೋಣ. ಆಧಾರ್ ತೆಗೆದುಕೊಂಡು ಬನ್ನಿ’ ಎಂದಿದ್ದರು. ರಾಜರಾಜೇಶ್ವರಿನಗರ ಬಳಿಯ ವಸತಿಗೃಹವೊಂದಕ್ಕೆ ಬಂದಿದ್ದರು. ನಂತರ, ಇಬ್ಬರೂ ಕೊಠಡಿಯೊಂದನ್ನು ಬಾಡಿಗೆ ಪಡೆದು ತಂಗಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಅದೇ ಕೊಠಡಿಗೆ ಹೋಗಿದ್ದ ಕಲೀಂ ಹಾಗೂ ಇತರೆ ಆರೋಪಿಗಳು, ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದರು. ‘ಕೆಲಸಕ್ಕಾಗಿ ಬಂದ ಮಹಿಳೆಯನ್ನು ದುರ್ಬಳಕೆ ಮಾಡಿಕೊಂಡಿದ್ದಿಯಾ? ನಿನ್ನ ಪತ್ನಿ ಹಾಗೂ ಸಂಬಂಧಿಕರಿಗೆ ವಿಷಯ ತಿಳಿಸುತ್ತೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಅಪ್‌ಲೋಡ್ ಮಾಡುತ್ತೇವೆ’ ಎಂದು ಬೆದರಿಸಿದ್ದರು. ಸ್ಥಳದಿಂದ ಬಿಟ್ಟು ಕಳುಹಿಸಲು ₹ 6 ಲಕ್ಷ ನೀಡುವಂತೆ ಬೇಡಿಕೆ ಇರಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.