ADVERTISEMENT

ಡ್ರ್ಯಾಗರ್‌ನಿಂದ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ: ರೌಡಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 21:37 IST
Last Updated 17 ನವೆಂಬರ್ 2021, 21:37 IST
ರೌಡಿ ಪಳನಿ 
ರೌಡಿ ಪಳನಿ    

ಬೆಂಗಳೂರು: ಡ್ರ್ಯಾಗರ್‌ನಿಂದ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್‌ ಪಳನಿ ಯಾನೆ ಕರ್ಚೀಫ್‌ ಪಳನಿ (35) ಎಂಬಾತನನ್ನು ಸಿಸಿಬಿ ಪೊಲೀಸರು ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.

‘ಕೆಲ ತಿಂಗಳ ಹಿಂದೆ ಬೆಳ್ಳಂದೂರಿನಲ್ಲಿ ಮುನ್ನಾಕುಮಾರ್‌ ಎಂಬಾತನ ಕೊಲೆಯಾಗಿತ್ತು. ಆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪಳನಿ, ಅಶೋಕನಗರ ಠಾಣೆ ವ್ಯಾಪ್ತಿಯ ಹೊಸೂರು ರಸ್ತೆಯ ಸ್ಮಶಾನದ ಬಳಿ ಅಡಗಿರುವ ಮಾಹಿತಿ ಲಭಿಸಿತ್ತು. ಆತನ ಚಲನವಲನಗಳ ಮೇಲೆ ನಿಗಾ ಇಡಲಾಗಿತ್ತು. ಆತ ಅಲ್ಲಿ ಇರುವುದು ಖಾತರಿಯಾದ ನಂತರ ಸಿಸಿಬಿ ಎಸಿಪಿ ಪರಮೇಶ್ವರ್‌ ನೇತೃತ್ವದ ತಂಡವು ಮಂಗಳವಾರ ತಡರಾತ್ರಿ ಸ್ಥಳಕ್ಕೆ ಹೋಗಿ ಆತನನ್ನು ಸುತ್ತುವರಿದಿತ್ತು. ಪೊಲೀಸರನ್ನು ಕಂಡೊಡನೆ ಆತ ಓಡಿಹೋಗಲು ಯತ್ನಿಸಿದ್ದ. ಶರಣಾಗುವಂತೆ ಹೇಳಿದರೂ ಕೇಳಲಿಲ್ಲ. ಆತನ ಬೆನ್ನಟ್ಟಿದ್ದ ಇನ್‌ಸ್ಪೆಕ್ಟರ್‌ ಹರೀಶ್‌ಕುಮಾರ್‌ ಅವರ ಎಡಗೈಗೆ ಡ್ರ್ಯಾಗರ್‌ನಿಂದ ತಿವಿದಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆತ ಓಡಿಹೋಗಲು ಮುಂದಾದಾಗ ಎಸಿಪಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಅದನ್ನೂ ಲೆಕ್ಕಿಸದೆ ಆತ ತನ್ನನ್ನು ಬಂಧಿಸಲು ಮುಂದಾದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ. ಹೀಗಾಗಿ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡೇಟು ಹೊಡೆದು ಬಂಧಿಸಲಾಯಿತು. ಗಾಯಗೊಂಡಿರುವ ಇನ್‌ಸ್ಪೆಕ್ಟರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗೂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘2013ರಲ್ಲಿ ಆನೆಪಾಳ್ಯದಲ್ಲಿ ನಡೆದಿದ್ದ ಲೋಕಿ ಎಂಬಾತನ ಹತ್ಯೆಯಲ್ಲಿ ಪಳನಿ ಪಾತ್ರವಿತ್ತು. ರೌಡಿಶೀಟರ್‌ ಬಬ್ಲಿ ಜೊತೆ ಒಡನಾಟ ಹೊಂದಿದ್ದ ಪಳನಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಮೂರು ಕೊಲೆ, ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದವು. ಈತ ಒಟ್ಟು 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈತನ ವಿರುದ್ಧ ಸದ್ಯ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.