ಬೆಂಗಳೂರು: ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಮನೆಯಲ್ಲಿ ಸಿಕ್ಕ ರಹಸ್ಯ ಪೆಟ್ಟಿಗೆಗಳನ್ನು ಗ್ಯಾಸ್ ಕಟರ್ ಮೂಲಕ ತೆರೆದು ಪರಿಶೀಲನೆ ನಡೆಸಿದರು.
ಬಾಣಸವಾಡಿ ಸರ್ವಿಸ್ ರಸ್ತೆಯಲ್ಲಿರುವ ಬಾಬು ಮನೆಗೆ ಹೋಗಿದ್ದ ಪೊಲೀಸರು, ಚಿನ್ನಾಭರಣವಿರುವ ಅನುಮಾನದ ಮೇರೆಗೆ ಗೋಡೆ ಒಡೆದಿದ್ದರು. ಅಲ್ಲಿಯೇ ರಹಸ್ಯ ಪೆಟ್ಟಿಗೆಗಳು ಸಿಕ್ಕಿದ್ದವು.
‘ಪೆಟ್ಟಿಗೆಗಳನ್ನು ತೆರೆದು ಪರಿಶೀಲಿಸಲಾಯಿತು. ಅದರಲ್ಲಿ ಯಾವುದೇ ಚಿನ್ನಾಭರಣವಿರಲಿಲ್ಲ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
ಮಾಹಿತಿ ಸೋರಿಕೆ: ಬಾಬು ಮನೆ ಮೇಲೆ ದಾಳಿ ಮಾಡಲು ಸಿಸಿಬಿ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿದ್ದರು. ಆ ಮಾಹಿತಿ ಸೋರಿಕೆಯಾಗಿದ್ದು, ಅದರಿಂದಲೇ ಬಾಬು ಚಿನ್ನಾಭರಣವನ್ನು ಬೇರೆಡೆ ಸಾಗಿಸಿರುವ ಅನುಮಾನ ಹಿರಿಯ ಅಧಿಕಾರಿಗಳಿಗೆ ಬಂದಿದೆ.
‘ಸಿಸಿಬಿಯಲ್ಲಿರುವ ಕೆಲ ಸಿಬ್ಬಂದಿಯೇ ಬಾಬುವಿಗೆ ಮಾಹಿತಿ ನೀಡಿರುವ ಶಂಕೆ ಇದೆ. ಅವರು ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿ ಹೇಳಿದರು.
ಮನೆಯಲ್ಲೇ ಪೊಲೀಸರ ಪಾರ್ಟಿ; ಡಿ. 30ರಂದು ಸಹ ಬಾಬುವಿನ ಮನೆಗೆ ಹೋಗಿದ್ದರು ಎನ್ನಲಾದ ಸಿಸಿಬಿಯ ಕೆಲ ಪೊಲೀಸರು ಮನೆಯಲ್ಲೇ ಮದ್ಯದ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದೆ. ಇದರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
‘ದಾಳಿಗೆ ಬಂದಿದ್ದಾಗ ಬಾಬು ಮನೆಯಲ್ಲಿ ಇರಲಿಲ್ಲ. ಆತನಿಗಾಗಿ ಪೊಲೀಸರು ಕಾಯುತ್ತ ಕುಳಿತಿದ್ದರು. ತಡರಾತ್ರಿಯಾದರೂ ಬಾಬು ಬಂದಿರಲಿಲ್ಲ. ಅವಾಗಲೇ ಪೊಲೀಸರು, ಮದ್ಯವನ್ನು ಮನೆಗೆ ತರಿಸಿಕೊಂಡು ಕುಡಿದಿದ್ದರು’ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಲಭ್ಯರಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.