ADVERTISEMENT

ಚಿತಾಗಾರದ ಕೆಲಸಗಾರರಿಗೆ ಇಲ್ಲ ವಿಮೆಯ ಭದ್ರತೆ

ದಿನಕ್ಕೆ 5ರಿಂದ 10 ಮೃತದೇಹಗಳ ಅಂತ್ಯಕ್ರಿಯೆ * ಹಗಲಿರುಳು ಕೆಲಸ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 14:58 IST
Last Updated 9 ಜುಲೈ 2020, 14:58 IST
ರಾಜು ಕಲ್ಪಳ್ಳಿ 
ರಾಜು ಕಲ್ಪಳ್ಳಿ    

ಬೆಂಗಳೂರು: ‘ಕೊರೊನಾ ಸೋಂಕಿನಿಂದ ತೀರಿಕೊಂಡವರ ಮೃತದೇಹದ ಅಂತ್ಯಕ್ರಿಯೆಯನ್ನು ನಾವೇ ಮಾಡಬೇಕು. ಸತ್ತವರ ಸಂಬಂಧಿಕರೂ ಬರುವುದಿಲ್ಲ. ದೇವರು ನಮಗೆ ನೀಡಿದ ಜವಾಬ್ದಾರಿ ಇದು ಎಂದುಕೊಂಡು ಹಗಲಿರುಳು ಕೆಲಸ ಮಾಡುತ್ತಿದ್ದೇವೆ. ಆದರೆ, ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲ. ವಿಮೆಯ ಭದ್ರತೆಯೂ ಇಲ್ಲ. ಆರೋಗ್ಯ ಕಾರ್ಡ್‌ ಕೂಡಾ ಕೊಟ್ಟಿಲ್ಲ’

ನಗರದ ಚಿತಾಗಾರಗಳಲ್ಲಿ ಕೆಲಸ ಮಾಡುತ್ತಿರುವ ನೌಕರರ ಅಳಲು ಇದು. ಈಗ ದಿನಕ್ಕೆ ಐದರಿಂದ ಹತ್ತು ಮೃತದೇಹಗಳ ಅಂತ್ಯಕ್ರಿಯೆ ಮಾಡಬೇಕಿದೆ. ಅವುಗಳಲ್ಲಿ ಬಹುತೇಕವು ಕೊರೊನಾ ಸೋಂಕಿತರ ಶವಗಳು.

‘ನಮಗೂ ಸೋಂಕು ತಗಲುವ ಅಪಾಯ ಇದ್ದೇ ಇರುತ್ತದೆ. ‌ಆದರೂ, ಈ ಸಂದರ್ಭದಲ್ಲಿ ಕರ್ತವ್ಯ ಮರೆಯಬಾರದು ಎಂಬ ಕಾರಣಕ್ಕೆ ಕೆಲಸ ಮಾಡುತ್ತಿದ್ದಾರೆ. ನಮಗೆ ಕೊರೊನಾ ಯೋಧರು ಎಂಬ ಹೆಗ್ಗಳಿಕೆ ಬೇಡ. ಸೂಕ್ತ ಸೌಲಭ್ಯ ನೀಡಿದರೆ ಸಾಕು’ ಎಂದು ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿಯ ರುದ್ರಭೂಮಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ರಾಜು ಕಲ್ಪಳ್ಳಿ ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

‘ನಮ್ಮ ಸಂಘಕ್ಕೆ ನಗರದಲ್ಲಿ ಒಟ್ಟು 148 ಜನ ಸದಸ್ಯರು ಇದ್ದಾರೆ. ಈ ಪೈಕಿ 45 ಜನ ಶವ ಸುಡುವ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಹಗಲಿರುಳು ಕೆಲಸ: ‘ಬೆಳಿಗ್ಗೆ 6ಕ್ಕೆ ಮನೆ ಬಿಟ್ಟರೆ ರಾತ್ರಿ 11ರವರೆಗೂ ಸ್ಮಶಾನದಲ್ಲಿಯೇ ಇರಬೇಕಾಗುತ್ತದೆ. ಈಗ ಸಾವಿಗೀಡಾದವರ ಶವಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕಾಗಿರುವುದರಿಂದ ಕನಿಷ್ಠ ಮೂರು ದಿನಗಳ ನಂತರವೇ ಸ್ಮಶಾನಕ್ಕೆ ತರಲಾಗುತ್ತಿದೆ. ಒಂದೊಂದು ಶವಸಂಸ್ಕಾರದ ನಂತರವೂ ಪಿಪಿಇ ಕಿಟ್‌ಗಳನ್ನು ಅದರ ಜೊತೆಗೆ ಸುಟ್ಟು ಹಾಕಿ, ಬೇರೆ ಕಿಟ್‌ಗಳನ್ನು ಧರಿಸುತ್ತೇವೆ’ ಎಂದು ಅವರು ವಿವರಿಸಿದರು.

‘ಕೊರೊನಾ ಸೋಂಕಿತರ ಶವಗಳ ಜೊತೆ ಸಂಬಂಧಿಕರು ಕೆಲವರು ಬಂದಿರುತ್ತಾರೆ. ಕೊನೆಯದಾಗಿ ಮುಖ ತೋರಿಸಿ ಎಂದು ಪೀಡಿಸುತ್ತಾರೆ. ಅವರ ಸಂಕಟ ನೋಡಿದಾಗ ನಮಗೂ ತುಂಬಾ ನೋವಾಗುತ್ತದೆ. ಇಡೀ ಕುಟುಂಬದವರು ಕ್ವಾರಂಟೈನ್‌ನಲ್ಲಿದ್ದಾಗ, ಅವರಿಗೆ ಸಂಬಂಧಿಸಿದ ಶವವನ್ನು ಮಾತ್ರ ತಂದಿರುತ್ತಾರೆ. ನಾವೇ ದೇವರಲ್ಲಿ ಪ್ರಾರ್ಥಿಸಿ, ವಿದ್ಯುತ್‌ ಚಿತಾಗಾರದಲ್ಲಿ ಸುಡುತ್ತೇವೆ’ ಎಂದು ಕೆಲಸಗಾರರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.