
ಜನಗಣತಿ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಜನಗಣತಿ ಪ್ರಕ್ರಿಯೆಗೆ ಸಿದ್ಧಪಡಿಸಲಾಗಿರುವ ಮೊಬೈಲ್ ಆ್ಯಪ್ ಅನ್ನು ಜೆ.ಪಿ. ಪಾರ್ಕ್ ವಾರ್ಡ್‌ನಲ್ಲಿ ಪರೀಕ್ಷಾರ್ಥವಾಗಿ ಬಳಸಲಾಗುತ್ತಿದೆ.
‘ಜೆ.ಪಿ ಪಾರ್ಕ್ ವಾರ್ಡ್‌ನಲ್ಲಿ ಮನೆಪಟ್ಟಿ ಮೊಬೈಲ್ ಆ್ಯಪ್ ಪರೀಕ್ಷಾರ್ಥ ಕಾರ್ಯಾಚರಣೆಗೆ 83 ಗಣತಿದಾರರು, 16 ಮೇಲ್ವಿಚಾರಕರು ಹಾಗೂ ವಾರ್ಡ್ ಮಟ್ಟದಲ್ಲಿ ಸಮಗ್ರ ಮೇಲ್ವಿಚಾರಣೆಗೆ ಒಬ್ಬ ಉಸ್ತುವಾರಿ ಅಧಿಕಾರಿಯನ್ನು ನಿಯೋಜಿಸಲಾಗಿದೆ. ನವೆಂಬರ್ 30ರವರೆಗೆ ಪ್ರಕ್ರಿಯೆ ನಡೆಯಲಿದೆ’ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ತಿಳಿಸಿದರು.
‘ಗಣತಿದಾರರು ತಮಗೆ ಹಂಚಿಕೆಯಾದ ‘ಗಣತಿ ಬ್ಲಾಕ್’ಗಳಲ್ಲಿ ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರ ಜನಗಣತಿ ಪ್ರಧಾನ ನೋಂದಣಿ ಕಚೇರಿಯ ಸಹಾಯಕ ನಿರ್ದೇಶಕರಾದ ಜಿತೇಂದ್ರ ಶರ್ಮಾ, ಆಕಾಶ್ ದೇವ್ರಾ ಅವರು ಜೆ.ಪಿ ಪಾರ್ಕ್ ವಾರ್ಡ್‌ನಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯನ್ನು ಮಂಗಳವಾರ ಪರಿಶೀಲಿಸಿದರು’ ಎಂದು ಹೇಳಿದರು.
ಕೇಂದ್ರ ಸರ್ಕಾರವು 2027ರಲ್ಲಿ ದೇಶವ್ಯಾಪಿ ಜನಗಣತಿ ಕಾರ್ಯಾಚರಣೆ ನಡೆಸಲಿದೆ. ಇದರ ಪೂರ್ವ ತಯಾರಿಗಾಗಿ 2026ರಲ್ಲಿ ಮನೆಪಟ್ಟಿ ಸಿದ್ದಪಡಿಸುವ ಕಾರ್ಯವನ್ನು ತಂತ್ರಜ್ಞಾನಾಧಾರಿತವಾಗಿ ಪೂರ್ಣಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಅಭಿವೃದ್ಧಿಪಡಿಸಲಾಗಿರುವ ಮೊಬೈಲ್ ಆ್ಯಪ್‌ನ ಕಾರ್ಯಕ್ಷಮತೆ ಮತ್ತು ಬಳಕೆಯನ್ನು ಪರಿಶೀಲಿಸಲು, ‘ಪರೀಕ್ಷಾರ್ಥ ಮನೆಪಟ್ಟಿ ತಯಾರಿ ಕಾರ್ಯ’ವನ್ನು ನಡೆಸಲಾಗುತ್ತಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಜೆ.ಪಿ. ಪಾರ್ಕ್ ವಾರ್ಡ್, ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ 46 ಹಳ್ಳಿಗಳು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ 27 ಹಳ್ಳಿಗಳಲ್ಲಿ ಜನಗಣತಿ ಪ್ರಕ್ರಿಯೆಗೆ ಮನೆಪಟ್ಟಿ ಸಿದ್ಧಪಡಿಸುವ ಕಾರ್ಯ ಆ್ಯಪ್‌ನಲ್ಲಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.