
ಬೆಂಗಳೂರು: ರಾಜ್ಯದ ಜೈಲುಗಳಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹಾಗೂ ಕಾರಾಗೃಹಗಳೊಂದಿಗೆ ಸಮನ್ವಯ ಸಾಧಿಸಲು ‘ಸೆಂಟ್ರಲ್ ಕಮಾಂಡ್ ಸೆಂಟರ್’ ಆರಂಭಿಸಲಾಗಿದೆ.
ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರು ಈ ‘ಸೆಂಟರ್’ ಉದ್ಘಾಟಿಸಿದರು.
ಪರಮೇಶ್ವರ ಮಾತನಾಡಿ, ‘ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡುವುದು, ಜನ್ಮದಿನ ಆಚರಣೆ, ಮಾದಕ ವಸ್ತು ಪತ್ತೆಗೆ ಸಂಬಂಧಿಸಿದ ವಿಡಿಯೊಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ ಸಮಿತಿ ರಚಿಸಿತು. ಕಾರಾಗೃಹ ಸುಧಾರಣೆಗೆ ಸಂಬಂಧಿಸಿದಂತೆ ಸಮಿತಿ ಕೆಲವು ಸಲಹೆಗಳನ್ನು ನೀಡಿದೆ. ರಾಜ್ಯದ ಜೈಲುಗಳಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆಯಲು ಈ ಕಮಾಂಡ್ ಸೆಂಟರ್ ಸಹಕಾರಿಯಾಗಲಿದೆ’ ಎಂದು ಹೇಳಿದರು.
‘ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ ಕೇಂದ್ರ ಕಾರಾಗೃಹಗಳು ಮತ್ತು ಮಂಗಳೂರು, ತುಮಕೂರು, ಬೆಂಗಳೂರು ದಕ್ಷಿಣ ಮತ್ತು ಚಾಮರಾಜನಗರ ಜಿಲ್ಲಾ ಕಾರಾಗೃಹಗಳ ಒಟ್ಟು 1,076 ಕ್ಯಾಮೆರಾಗಳನ್ನು ಕಮಾಂಡ್ ಸೆಂಟರ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಾರಾಗೃಹಗಳ ಸಿ.ಸಿ. ಟಿ.ವಿ ಕ್ಯಾಮೆರಾ ಪರಿಶೀಲನೆಗೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
‘ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಆಧಾರಿತ 332 ಸಿ.ಸಿ. ಟಿ.ವಿ ಕ್ಯಾಮೆರಾಗಳು ಅಳವಡಿಸಲಾಗಿದ್ದು, ಕೈದಿಗಳ ಓಡಾಟ, ಸಿಬ್ಬಂದಿ ಚಲನವಲನ ಪರಿಶೀಲನೆ ಮಾಡಲಾಗುತ್ತದೆ’ ಎಂದರು. ‘ಕಮಾಂಡ್ ಸೆಂಟರ್‌ಗೆ 20 ಸಿಬ್ಬಂದಿ ನಿಯೋಜಿಸಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.