ADVERTISEMENT

'ಭಯೋತ್ಪಾದನೆಯ ಕೇಂದ್ರಬಿಂದು' ಬೆಂಗಳೂರಲ್ಲಿ ಎನ್ಐಎ ಕೇಂದ್ರ: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 12:42 IST
Last Updated 27 ಸೆಪ್ಟೆಂಬರ್ 2020, 12:42 IST
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ   

ನವದೆಹಲಿ: ರಾಜ್ಯ ರಾಜಧಾನಿ ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿ ಪರಿಣಮಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಯುವ‌ ಮೋರ್ಚಾ ನೂತನ ಅಧ್ಯಕ್ಷ, ಸಂಸದ‌ ತೇಜಸ್ವಿ ಸೂರ್ಯ ಹೇಳಿದ್ದಾರೆ. ಜತೆಗೆ, ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಶಾಶ್ವತ ಕಚೇರಿಯನ್ನು ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದೂ ತಿಳಿಸಿದ್ದಾರೆ.

ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜೆ.‌ಹಳ್ಳಿಗಳಲ್ಲಿ ಇತ್ತೀಚೆಗೆ ಗಲಭೆ ನಡದಿರುವ ಹಾಗೂ ಈ ಹಿಂದೆ ರಾಜ್ಯದಲ್ಲಿ ಅನೇಕ ಉಗ್ರ ಸಂಘಟನೆಗಳ ದಾಳಿಯ ಹಿನ್ನೆಲೆಯಲ್ಲಿ ಸೂಕ್ತ ತನಿಖೆಗಾಗಿ ಈ ಕಚೇರಿ ಆರಂಭಿಸುವಂತೆ ಸಲ್ಲಿಸಿದ ಮನವಿಗೆ ಕೇಂದ್ರ ಸ್ಪಂದಿಸಿದೆ ಎಂದರು.

ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಶುಕ್ರವಾರ ಭೇಟಿ ಮಾಡಿ ಈ ಕುರಿತು ಚರ್ಚಿಸಿ ಮನವಿ‌ ಸಲ್ಲಿಸಲಾಗಿದೆ. ಇದಕ್ಕೆ ಸೂಕ್ತವಾಗಿ ಸ್ಪಂದಿಸಿರುವ ಸಚಿವರು ಎನ್ಐಎ ಕಚೇರಿ ಆರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು‌ ಅವರು ಹೇಳಿದರು.

ADVERTISEMENT

ಅನೇಕ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉಗ್ರರನ್ನು, ಉಗ್ರ ಸಂಘಟನೆಗಳನ್ನು ಮಟ್ಟ ಹಾಕಲು ಎನ್ಐಎ ಶಾಶ್ವತ ಕಚೇರಿಯ ಅಗತ್ಯ ಇದೆ ಎಂಬುದನ್ನು ಸಚಿವರಿಗೆ‌ ಮನವರಿಕೆ‌ ಮಾಡಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ರೋಸ್‌ ಈರುಳ್ಳಿ ‌ರಫ್ತನ್ನು ರದ್ದುಗೊಳಿಸದಂತೆ ಕೋರಿ ಕೇಂದ್ರದ ವಾಣಿಜ್ಯ‌ ಸಚಿವರಿಗೆ ಮನವಿ‌ ಸಲ್ಲಿಸಲಾಗಿದೆ. ಅದೇ ರೀತಿ ವಸತಿ ಯೋಜನೆ ಅಡಿ ರಾಜ್ಯದ‌ ಬಡ‌ಜನತೆಗೆ ಮತ್ತಷ್ಟು ಮನೆಗಳನ್ನು ಮಂಜೂರು ಮಾಡುವಂತೆ ವಸತಿ ಸಚಿವ ವಿ.ಸೋಮಣ್ಣ ಜೊತೆ ತೆರಳಿ ಕೇಂದ್ರಕ್ಕೆ ಕೋರಲಾಗಿದೆ ಎಂದು‌ ಅವರು ಹೇಳಿದರು.

ಬೆಂಗಳೂರಿನ ‌ಗೋವಿಂದರಾಜ‌ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವಂತೆಯೂ ಮನವಿ‌ ಸಲ್ಲಿಸಲಾಗಿದ್ದು ಕೇಂದ್ರವು ಈಡೇರಿಸುವ ಭರವಸೆ‌ ನೀಡಿದೆ ಎಂದು ಅವರು ತಿಳಿಸಿದರು.

ಯುವ‌ ಮೋರ್ಚಾ ಅಧ್ಯಕ್ಷ ಸ್ಥಾನದ ನಿರೀಕ್ಷೆ‌ ಇರಲಿಲ್ಲ. ಪ್ರಧಾನಿ ಮೋದಿ ಹಾಗೂ ಪಕ್ಷದ ‌ಅಧ್ಯಕ್ಷ‌ ಜೆ.ಪಿ. ನಡ್ಡಾ ಅವರು ಯುವಕರಿಗೆ ಸ್ಥಾನಮಾನದೊಂದಿಗೆ ಅಧಿಕಾರ‌ ನೀಡಿರುವುದು ಅಭಿನಂದನೀಯ‌ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.