ಬೆಂಗಳೂರು: ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಜಿ.ಶೋಭಾ ಹೇಳಿದರು.
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ (ಎಫ್‌ಪಿಎಇ) ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾಗೃತಿ ಕೊರತೆ, ಹಿಂಜರಿಕೆಯಿಂದ ಮಹಿಳೆಯರು ತಪಾಸಣೆಗೆ ಒಳಪಡುವುದು ಕಡಿಮೆ. ಹೆಣ್ಣುಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆ ಲಸಿಕೆಯನ್ನು ಎಫ್‌ಪಿಎಐ ವತಿಯಿಂದ ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕುಟುಂಬ ಯೋಜನೆಗೆ ಮಾತ್ರ ಸೀಮಿತವಾಗದೆ ಆಯಾ ಕಾಲದ ಸಮಸ್ಯೆಗಳಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಎಫ್‌ಪಿಎಇ ಸಾಗುತ್ತಿದೆ. ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಸಂಸ್ಥೆಗಳು ಎರಡು– ಮೂರು ವರ್ಷಕ್ಕೆ ಬಾಗಿಲು ಮುಚ್ಚಿವೆ. ಆದರೆ ಎಫ್‌ಪಿಎಇ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ನುಡಿದರು.
ಸಂಸ್ಥೆ ನಡೆದು ಬಂದ ಹಾದಿ ಬಗ್ಗೆ ವಿವರಿಸಿದ ಎಫ್‌ಪಿಎಐ ಬೆಂಗಳೂರು ಶಾಖೆ ಮುಖ್ಯಸ್ಥೆ ಡಾ.ಪದ್ಮಿನಿ ಪ್ರಸಾದ್, ‘ಕುಟುಂಬ ಯೋಜನೆ, ಗರ್ಭನಿರೋಧಕ್ಕೆ ಮಾತ್ರ ಸೀಮಿತವಾಗದೆ ಮಹಿಳಾ ಸಬಲೀಕರಣ, ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಬಾಲಕಿಯರು, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಆರೋಗ್ಯ ಸೇವೆ ಒದಗಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ’ ಎಂದು ವಿವರಿಸಿದರು.
ಇದೇ ವೇಳೆ ಸಂಸ್ಥೆ ವತಿಯಿಂದ ತಾಯಂದಿರಿಗೆ ಗರ್ಭಕಂಠ ಕ್ಯಾನ್ಸರ್ ತಪಾಸಣೆ ಮತ್ತು ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಉಪ ಪ್ರಧಾನ ವ್ಯವಸ್ಥಾಪಕ ಕೆ.ಪಾರ್ಥಸಾರಥಿ ನಾಯ್ಡು, ಎಫ್‌ಪಿಎಇನ ಆರ್ಥಿಕ ಸಲಹೆಗಾರರಾದ ಮಂಜುಳಾ ಜಗದೀಶ್, ಪ್ರಮುಖರಾದ ರೇಖಾ, ಶಾಂತಿ ಆರ್ .ಬಾಳಿಗ, ಬಿಬಿಎಂಪಿ ಕುಟುಂಬ ಕಲ್ಯಾಣಾಧಿಕಾರಿ ಡಾ.ಶೋಭಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.