ADVERTISEMENT

ಸಿಇಟಿ ಸೀಟು ಹಂಚಿಕೆ ಪಟ್ಟಿ ಪ್ರಕಟ ಇಂದು

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 2:28 IST
Last Updated 7 ಜುಲೈ 2018, 2:28 IST
   

ಬೆಂಗಳೂರು:ಪ್ರವೇಶ ಶುಲ್ಕಗಳು ನಿಗದಿಯಾಗುತ್ತಿದ್ದಂತೆ ಎಂಜಿನಿಯರಿಂಗ್‌ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಈ ಹಿಂದೆ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಒಟ್ಟು 13,494 ಸೀಟುಗಳನ್ನು ಪ್ರಕಟಿಸಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಉಳಿದ ಸೀಟುಗಳನ್ನು ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶೀಘ್ರ ಆಪ್ಷನ್ ಎಂಟ್ರಿ: ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಲಭ್ಯತಾ ಪಟ್ಟಿ ಪ್ರಕಟಿಸಿದ ನಂತರ ಆಯ್ಕೆ ದಾಖಲಿಸುವ (ಆಪ್ಷನ್ ಎಂಟ್ರಿ) ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲಾಗುವುದು.

ADVERTISEMENT

ಖಾಸಗಿ ಕಾಲೇಜಿನ ಸರ್ಕಾರಿ ಕೋಟಾದ ಸೀಟು ಹಂಚಿಕೆ ಪಟ್ಟಿ ಪ್ರಕಟವಾಗದ ಕಾರಣ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿಗೆ ಅವಕಾಶ ನೀಡಿರಲಿಲ್ಲ. ಭಾನುವಾರ ಅಥವಾ ಸೋಮವಾರ ಆಪ್ಷನ್ ಎಂಟ್ರಿ ಒಪನ್ ಆಗುವ ಸಾಧ್ಯತೆ ಇದೆ. ಖಾಸಗಿ ಹಾಗೂ ಸರ್ಕಾರಿ ಕಾಲೇಜು ಸೇರಿದಂತೆ ವಿದ್ಯಾರ್ಥಿಗಳು ತಮ್ಮ ರ್‍ಯಾಂಕ್‌ಗೆ ಅನುಗುಣವಾಗಿ ಕಾಲೇಜಿನ ಆಯ್ಕೆ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೊನೆಗೊಂಡ ಶುಲ್ಕ ಹಗ್ಗಜಗ್ಗಾಟ: ಬಹಳ ದಿನಗಳಿಂದ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ನಡುವಿನ ಹಗ್ಗಜಗ್ಗಾಟ ಶುಕ್ರವಾರ ಕೊನೆಗೊಂಡಿದ್ದು, ಶುಲ್ಕ ಹೆಚ್ಚಳ ಅಂತಿಮಗೊಂಡಿದೆ.

ಎಂಜಿನಿಯರಿಂಗ್‌ ಪ್ರವೇಶ ಶುಲ್ಕವನ್ನು ಶೇ 10 ಹಾಗೂ ವೈದ್ಯ ಕೋರ್ಸ್‌ಗಳ ಶುಲ್ಕವನ್ನು ಶೇ 8ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಉನ್ನತ ಶಿಕ್ಷಣ ಸಚಿವ ಹಾಗೂ ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯದರ್ಶಿ ಎಂ. ಕೆ. ಪಾಂಡುರಂಗ ಶೆಟ್ಟಿ ನಡುವೆ ನಡೆದ ಸಮನ್ವಯ ಸಭೆಯಲ್ಲಿ, ‘ಇನ್ನು ಆರು ತಿಂಗಳಲ್ಲಿ ಸಮಿತಿ ರಚಿಸಿ ಈಗ ನಿಗದಿಗೊಳಿಸಿರುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶ ಶುಲ್ಕವನ್ನು ಪರಿಷ್ಕರಣೆಗೊಳಿಸಬೇಕು’ ಎನ್ನುವ ಮಾತುಕತೆಯೂ ನಡೆದಿದೆ.

ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ 20ರಷ್ಟು ಶುಲ್ಕ ಏರಿಕೆಗೆ ಬೇಡಿಕೆ ಇಟ್ಟಿದ್ದವು. ಸರ್ಕಾರ ಮನವೊಲಿಕೆ ಸಫಲವಾದದ್ದರಿಂದ, ಶೇ. 8ರಷ್ಟು ಶುಲ್ಕ ಹೆಚ್ಚಳಕ್ಕೆ ಸಮ್ಮತಿ ಸೂಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.