
ಕಡಲೆಕಾಯಿ ಪರಿಷೆ (ಸಂಗ್ರಹ ಚಿತ್ರ)
ಬೆಂಗಳೂರು: ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆಯನ್ನು ನವೆಂಬರ್ 17ರಿಂದ ಆಯೋಜಿಸಲು ಮುಜರಾಯಿ ಇಲಾಖೆ ನಿರ್ಧರಿಸಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ಎರಡು ದಿನಗಳ ಕಡಲೆಕಾಯಿ ಪರಿಷೆಯನ್ನು ಮೊದಲ ಬಾರಿಗೆ ಐದು ದಿನಕ್ಕೆ ವಿಸ್ತರಿಸಿ, ವಿಜೃಂಭಣೆಯಿಂದ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
2024ರ ಕಾರ್ತೀಕ ಮಾಸ ಕೊನೆಯ ಸೋಮವಾರದ ಸಂದರ್ಭದಲ್ಲಿ ನಡೆದಿದ್ದ ಕಡಲೆಕಾಯಿ ಪರಿಷೆಯಲ್ಲಿ ಸುಮಾರು ಐದು ಲಕ್ಷ ಭಕ್ತಾದಿಗಳು ಭಾಗವಹಿಸಿದ್ದರು. ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ಬಾರಿ ಐದು ದಿನ ನಡೆಯುವ ಕಡಲೆಕಾಯಿ ಪರಿಷೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 17ರಂದು ಚಾಲನೆ ನೀಡಲಿದ್ದಾರೆ. 21 ಬಸವಣ್ಣ ಮೂರ್ತಿಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಪರಿಷೆ ಸಂದರ್ಭದಲ್ಲಿ ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಎನ್.ಆರ್. ರಸ್ತೆಗಳಲ್ಲೂ ದೀಪಾಲಂಕಾರ ಮಾಡಲಾಗುವುದು. ಅಂಗಡಿಯವರು ಬಟ್ಟೆ ಬ್ಯಾಗ್‌ಗಳನ್ನು ಬಳಸಲು ಮತ್ತು ಸಾರ್ವಜನಿಕರಿಗೆ ‘ಪರಿಷೆಗೆ ಬನ್ನಿ, ಕೈ ಚೀಲ ತನ್ನಿ’ ಎಂಬ ಘೋಷಣೆಯೊಂದಿಗೆ ಎನ್‌ಜಿಒಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಮುಕ್ತ ಪರಿಷೆ ಆಚರಿಸಲು ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಬುಲ್ ಟೆಂಪಲ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಈ ಬಾರಿಯೂ ಸುಂಕ ವಸೂಲಾತಿ ಟೆಂಡರ್ ಕೈಬಿಡಲಾಗುತ್ತದೆ. ಯಾವುದೇ ಸುಂಕ ಸಂಗ್ರಹಿಸುವುದಿಲ್ಲ. ಕಡಲೆಕಾಯಿ ಪರಿಷೆ ದಿನಗಳಂದು ಆರೋಗ್ಯ, ಸ್ವಚ್ಛತೆ, ನೈರ್ಮಲ್ಯಕ್ಕೆ ಒತ್ತು ನೀಡಲಾಗುತ್ತದೆ. ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ.ಎಂ .ನಾಗರಾಜ್, ಶ್ರೀ ದ್ವಾರಕಾನಾಥ್, ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ದಿಗ್ವಿಜಯ ಬೋಡ್ಕೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.