ADVERTISEMENT

ಮಾಂಗಲ್ಯ ಕಳವು: ಜಿಮ್ ತರಬೇತುದಾರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 20:30 IST
Last Updated 21 ಜನವರಿ 2023, 20:30 IST

ಬೆಂಗಳೂರು: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತೊಯ್ದಿದ್ದ ಆರೋಪಿ ಮಂಜುನಾಥ್ ಅಲಿಯಾಸ್ ಜಿಮ್ ಮಂಜ ಎಂಬುವರನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಮಂಜುನಾಥ್, ಜಿಮ್ ತರಬೇತುದಾರ. ಈತನಿಗೆ ಬರುತ್ತಿದ್ದ ಸಂಬಳ ಜೀವನ ನಿರ್ವಹಣೆಗೆ ಸಾಲುತ್ತಿರಲಿಲ್ಲ. ಇದೇ ಕಾರಣಕ್ಕೆ ಕಳ್ಳತನ ಮಾಡಲು ಸಂಚು ರೂಪಿಸಿದ್ದ. 2022ರ ಡಿ. 4ರಂದು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘ಕೃತ್ಯದ ನಂತರ ಪರಾರಿಯಾಗಿದ್ದ ಆರೋಪಿ, ತಾನು ಧರಿಸಿದ್ದ ಬಟ್ಟೆಗಳನ್ನು ಸುಟ್ಟು ಹಾಕಿದ್ದ. ಠಾಣೆ ಹಿಂಭಾಗದಲ್ಲಿದ್ದ ಮನೆಯಲ್ಲಿ ವಾಸವಿದ್ದ ಈತ, ಪೊಲೀಸರ ಚಲನವಲನಗಳನ್ನು ಆಗಾಗ ಗಮನಿಸುತ್ತಿದ್ದ. ಯಾವುದೇ ಸುಳಿವು ಸಿಗದಂತೆ ಎಲ್ಲ ಪುರಾವೆಗಳನ್ನು ನಾಶಪಡಿಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮಾಂಗಲ್ಯ ಕಳವು ಸಂಬಂಧ ಮಹಿಳೆ ದೂರು ನೀಡಿದ್ದರು. ಒಂದೂವರೆ ತಿಂಗಳಾದರೂ ಆರೋಪಿ ಸುಳಿವು ಸಿಕ್ಕಿರಲಿಲ್ಲ. ಆದರೆ, ಇತ್ತೀಚೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯದಿಂದ ಆರೋಪಿ ಸುಳಿವು ಲಭ್ಯವಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ. ಈತನಿಂದ ₹ 2.20 ಲಕ್ಷ ಮೌಲ್ಯದ ಮಾಂಗಲ್ಯ ಸರ ಜಪ್ತಿ ಮಾಡಲಾಗಿದೆ. ಇದೇ ಮೊದಲು ಈತ ಕೃತ್ಯ ಎಸಗಿದ್ದನೆಂಬುದು ಗೊತ್ತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.