ADVERTISEMENT

51 ಚಿನ್ನದ ಸರ ಕದ್ದಿದ್ದ ಆರೋಪಿ ಬಂಧನ

ಎರಡು ತಿಂಗಳು ತನಿಖೆ * ಹೆಲ್ಮೆಟ್, ಟೀಶರ್ಟ್ ನೀಡಿದ ಸುಳಿವು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 19:45 IST
Last Updated 26 ಆಗಸ್ಟ್ 2022, 19:45 IST
ಪುಟ್ಟೇನಹಳ್ಳಿ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ಚಿನ್ನಾಭರಣ
ಪುಟ್ಟೇನಹಳ್ಳಿ ಪೊಲೀಸರು ಆರೋಪಿಯಿಂದ ಜಪ್ತಿ ಮಾಡಿರುವ ಚಿನ್ನಾಭರಣ   

ಬೆಂಗಳೂರು: ನಗರದ 32 ಠಾಣೆಗಳ ವ್ಯಾಪ್ತಿಯಲ್ಲಿ 51 ಮಹಿಳೆಯರ ಚಿನ್ನದ ಸರ ಕಳವು ಮಾಡಿದ್ದ ಆರೋಪಿ ಸಂತೋಷ್ ಎಂಬುವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಸಂತೋಷ್, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಜೆ.ಪಿ.ನಗರದಲ್ಲಿ ವಾಸವಿದ್ದ. ಈತನನ್ನು ಬಂಧಿಸಿ ₹ 1.50 ಕೋಟಿ ಮೌಲ್ಯದ 2 ಕೆ.ಜಿ. 510 ಗ್ರಾಂ ಚಿನ್ನಾಭರಣ, ಎರಡು ದ್ವಿಚಕ್ರ ವಾಹನ ಹಾಗೂ 2 ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ತಿಳಿಸಿದರು.

‘ಆರೋಪಿ ಸಂತೋಷ್ ಜೊತೆ ಕೃತ್ಯಕ್ಕೆ ಸಹಕರಿಸುತ್ತಿದ್ದ ಹಾಗೂ ಚಿನ್ನಾಭರಣ ಮಾರಲು ಸಹಾಯ ಮಾಡುತ್ತಿದ್ದ ಇನ್ನೊಬ್ಬ ಆರೋಪಿ ರವಿ ಎಂಬಾತನನ್ನೂ ಬಂಧಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಸರಗಳವು ಮಾಡಲೆಂದೇ ಆರೋಪಿ ದ್ವಿಚಕ್ರ ವಾಹನ ಕದಿಯುತ್ತಿದ್ದ. ಅವುಗಳ ಬಣ್ಣ ಹಾಗೂ ನೋಂದಣಿ ಫಲಕವನ್ನು ಬದಲಾಯಿಸುತ್ತಿದ್ದ. ನಗರದ ಸುತ್ತಾಡಿ, ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ’ ಎಂದೂ ತಿಳಿಸಿದರು.

ಹೆಲ್ಮೆಟ್, ಟೀಶರ್ಟ್ ಸುಳಿವು: ‘ಮನೆಯಿಂದ ಹೊರಡುವಾಗಲೇ ಆರೋಪಿ ಹೆಲ್ಮೆಟ್ ಧರಿಸುತ್ತಿದ್ದ. ಮಾರ್ಗಮಧ್ಯೆ ಎಲ್ಲಿಯೂ ಹೆಲ್ಮೆಟ್ ತೆಗೆಯುತ್ತಿರಲಿಲ್ಲ. ಚಿನ್ನದ ಸರ ಕಳ್ಳತನ ಮಾಡಿಕೊಂಡು ಮನೆಗೆ ವಾಪಸು ಬಂದ ನಂತರವೇ ಹೆಲ್ಮೆಟ್ ತೆಗೆಯುತ್ತಿದ್ದ. ಹೀಗಾಗಿ, ಈತನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮೈಕೊ ಲೇಔಟ್‌ನಲ್ಲಿ ಮಹಿಳೆಯೊಬ್ಬರ 40 ಗ್ರಾಂ ಚಿನ್ನದ ಸರವನ್ನು ಆರೋಪಿ ಕಿತ್ತೊಯ್ದಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎರಡು ತಿಂಗಳಿನಿಂದ ನಿರಂತರವಾಗಿ ತನಿಖೆ ನಡೆಸುತ್ತಿದ್ದರು. ಹೆಲ್ಮೆಟ್ ಹಾಗೂ ಟೀಶರ್ಟ್ ಸುಳಿವು ಆಧರಿಸಿ ಕೊತ್ತನೂರು ದಿಣ್ಣೆ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ’ ಎಂದೂ ತಿಳಿಸಿವೆ.

100ಕ್ಕೂ ಹೆಚ್ಚು ಕ್ಯಾಮೆರಾ ಪರಿಶೀಲನೆ: ‘ಆರೋಪಿ ಕೃತ್ಯ ಎಸಗಿದ್ದ ಸ್ಥಳ ಹಾಗೂ ಅಕ್ಕ–ಪಕ್ಕದ ರಸ್ತೆಗಳಲ್ಲಿದ್ದ 100ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿ ಸುಳಿವು ಪತ್ತೆ ಮಾಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬ್ಯಾಡರಹಳ್ಳಿ, ಮಹಾಲಕ್ಷ್ಮಿ ಲೇಔಟ್, ವೈಯಾಲಿಕಾವಲ್, ಸಂಪಂಗಿರಾಮನಗರ, ವಿಜಯನಗರ, ಮಲ್ಲೇಶ್ವರ, ಮಾರತ್ತಹಳ್ಳಿ, ಹನುಮಂತನಗರ, ಸುಬ್ರಮಣ್ಯಪುರ, ದೇವನಹಳ್ಳಿ, ವಿದ್ಯಾರಣ್ಯಪುರ, ಮೈಕೊ ಲೇಔಟ್, ಹೆಣ್ಣೂರು, ಕೊತ್ತನೂರು, ಸಂಪಿಗೆಹಳ್ಳಿ, ಹುಳಿಮಾವು, ಯಲಹಂಕ ನ್ಯೂ ಟೌನ್, ಜ್ಞಾನಭಾರತಿ, ಹಲಸೂರು, ಕೆ.ಆರ್.ಪುರ, ಬಾಗಲಗುಂಟೆ ಸೇರಿದಂತೆ 32 ಠಾಣೆಗಳ ವ್ಯಾಪ್ತಿಯಲ್ಲಿ 51 ಚಿನ್ನದ ಸರಗಳನ್ನು ಆರೋಪಿ ಕದ್ದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.