ADVERTISEMENT

ಸಾಲ ತೀರಿಸಲು ಸರಗಳ್ಳತನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:16 IST
Last Updated 24 ಆಗಸ್ಟ್ 2024, 15:16 IST
<div class="paragraphs"><p>ಬಂಧನ( ಸಾಂಕೇತಿಕ ಚಿತ್ರ)</p></div>

ಬಂಧನ( ಸಾಂಕೇತಿಕ ಚಿತ್ರ)

   

ಬೆಂಗಳೂರು: ಸಾಲ ತೀರಿಸುವುದಕ್ಕಾಗಿ ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಕತ್ರಿಗುಪ್ಪೆ ನಿವಾಸಿ ಕುಮಾರ್ ಎಂಬಾತನನ್ನು ಬಂಧಿಸಿ, ₹45 ಸಾವಿರ ಮೌಲ್ಯದ 7.2 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಆನ್‌ಲೈನ್‌ ಗೇಮ್‌ ಆ್ಯಪ್‌ನಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಆರೋಪಿ, ಸಾಕಷ್ಟು ಹಣ ಕಳೆದುಕೊಂಡಿದ್ದ. ಸುಮಾರು ₹5 ಲಕ್ಷ ರೂಪಾಯಿ ಸಾಲ ಮಾಡಿದ್ದ. ಸಾಲಗಾರರು ಹಣ ವಾಪಸ್ ನೀಡುವಂತೆ ಪೀಡಿಸುತ್ತಿದ್ದರು. ಸಾಲ ತೀರಿಸುವ ಸಲುವಾಗಿ ಆರೋಪಿ ಸರಗಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಳಾಸ ಕೇಳುವ ನೆಪದಲ್ಲಿ ಆರೋಪಿ ಆ.14ರಂದು ಭೈರಪ್ಪ ಲೇಔಟ್‌ನಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಸಹಾಯದಿಂದ ಹೊಸಕೆರೆಹಳ್ಳಿ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಗಿರವಿ ಅಂಗಡಿಯಲ್ಲಿ ಅಡವಿಟ್ಟಿದ್ದ ಸರವನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಹೇಳಿದ್ದಾರೆ.

ನಾಲ್ಕು ದ್ವಿಚಕ್ರವಾಹನ ವಶ: ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ನಾಯಂಡಹಳ್ಳಿ ನಿವಾಸಿ ಪೆಪ್ಸಿ ರಘು ಎಂಬಾತನನ್ನು ಬಂಧಿಸಿ, ₹4.10 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಮನೆ ಕಳ್ಳತನ ಮತ್ತು ದ್ವಿಚಕ್ರ ವಾಹನಗಳ ಕಳವು ಸೇರಿದಂತೆ 15 ಪ್ರಕರಣಗಳು ಆರೋಪಿ ವಿರುದ್ಧ ದಾಖಲಾಗಿವೆ.

‘ಜುಲೈ 15ರಂದು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆ ಬಳಿ ವ್ಯಕ್ತಿಯೊಬ್ಬರ ದ್ವಿಚಕ್ರ ವಾಹನ ಕಳುವಾಗಿತ್ತು. ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಯ ಸುಳಿವು ದೊರೆಯಿತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ವಿವಿಧ ಪೊಲೀಸ್ ಠಾಣೆ, ಹಾಸನ ಹಾಗೂ ಮೈಸೂರು ನಗರದಲ್ಲಿ ಕಳವು, ದರೋಡೆ, ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ಆರೋಪಿ ವಿರುದ್ಧ ದಾಖಲಾಗಿವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.