ADVERTISEMENT

ಸರಗಳವು: ಧಾರವಾಡದಲ್ಲಿ ಸೆರೆಸಿಕ್ಕ ಇರಾನಿ ಸದಸ್ಯ ಜೈಲಿಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 21:45 IST
Last Updated 23 ಡಿಸೆಂಬರ್ 2022, 21:45 IST
   

ಬೆಂಗಳೂರು: ಸರಗಳವು ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಇರಾನಿ ತಂಡದ ಸದಸ್ಯ ಅಬುಜರ್ ಅಲಿಯನ್ನು (26) ಬನಶಂಕರಿ ಠಾಣೆ ಪೊಲೀಸರು ಧಾರವಾಡದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದು, ಸದ್ಯ ಈತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ.

‘ಬೆಂಗಳೂರಿನ 36 ಕಡೆ ಮಹಿಳೆಯರ ಚಿನ್ನದ ಸರಗಳವು ಮಾಡಿದ್ದ ಅಬುಜರ್‌ನನ್ನು 2019ರಲ್ಲಿ ಬಂಧಿಸಲಾಗಿದೆ. ಕೆಲ ದಿನ ಜೈಲಿನಲ್ಲಿದ್ದ ಈತ, ಜಾಮೀನು ಮೇಲೆ ಹೊರಬಂದಿದ್ದ. ಇದಾದ ನಂತರ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ನ್ಯಾಯಾಲಯದ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ, ಈತನ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಧಾರವಾಡ ಟೋಲ್‌ನಾಕಾ ಬಳಿಯ ಇರಾನಿ ಕಾಲೊನಿಯಲ್ಲಿ ನೆಲೆಸಿದ್ದ ಅಬುಜರ್ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಧಾರವಾಡಕ್ಕೆ ಹೋಗಿದ್ದ ವಿಶೇಷ ತಂಡ, ಅಬುಜರ್‌ನನ್ನು ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.