ADVERTISEMENT

ಆನೇಕಲ್: ಒಂದೇ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಚೈತನ್ಯ ರೆಸಿಡೆನ್ಸಿಯಲ್‌ ಕಾಲೇಜು ಅ.20 ರವರೆಗೆ ಬಂದ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 4:07 IST
Last Updated 29 ಸೆಪ್ಟೆಂಬರ್ 2021, 4:07 IST
ಕೋವಿಡ್‌ ಪ್ರಕರಣಗಳು ವರದಿಯಾದ ಚೈತನ್ಯ ರೆಸಿಡೆನ್ಸಿಯಲ್‌ ಕಾಲೇಜನ್ನು ಅಧಿಕಾರಿಗಳು ಪರಿಶೀಲಿಸಿದರು.
ಕೋವಿಡ್‌ ಪ್ರಕರಣಗಳು ವರದಿಯಾದ ಚೈತನ್ಯ ರೆಸಿಡೆನ್ಸಿಯಲ್‌ ಕಾಲೇಜನ್ನು ಅಧಿಕಾರಿಗಳು ಪರಿಶೀಲಿಸಿದರು.   

ಬೆಂಗಳೂರು: ಆನೇಕಲ್ ತಾಲ್ಲೂಕಿನ ಹುಸ್ಕೂರು ಸಮೀಪದ ಚೈತನ್ಯ ರೆಸಿಡೆನ್ಸಿಯಲ್‌ ಕಾಲೇಜಿನ 60 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದ್ದು, ಇನ್ನೂ 105 ವಿದ್ಯಾರ್ಥಿಗಳ ಪರೀಕ್ಷೆ ವರದಿ ಬರಬೇಕಿದೆ.

ಕಾಲೇಜಿನಹಾಸ್ಟೆಲ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಭಾನುವಾರ ಜ್ವರ ಕಾಣಿಸಿಕೊಂಡಿತ್ತು. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಬಳ್ಳಾರಿಯ ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ, ಕಾಲೇಜಿನ ಎಲ್ಲ 400 ವಿದ್ಯಾರ್ಥಿಗಳಿಗೆ ಕೋವಿಡ್ ಆರ್‌ಟಿ–ಪಿಸಿಆರ್ ಹಾಗೂ ರ್‍ಯಾಟ್ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 59 ಮಂದಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ. 105 ವಿದ್ಯಾರ್ಥಿಗಳ ಪರೀಕ್ಷಾ ವರದಿ ಬುಧವಾರ ಬರಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟಿರುವುದರಿಂದ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಯ್‌ ನೇತೃತ್ವದ ಸಿಬ್ಬಂದಿ ತಂಡ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿತು.ಈ ಕಾಲೇಜಿನ ವಸತಿ ನಿಲಯದಲ್ಲಿ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ADVERTISEMENT

ಕಾಲೇಜ್ ಬಂದ್:ಅಕ್ಟೋಬರ್ 20ರವರೆಗೆ ಕಾಲೇಜ್ ಅನ್ನು ಬಂದ್ ಮಾಡಲಾಗಿದೆ. ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗೂ ಪರೀಕ್ಷೆ ನಡೆಸಲಾಗಿದ್ದು, ಅವರು ಸೋಂಕಿತರಾಗಿಲ್ಲ ಎನ್ನುವುದು ದೃಢಪಟ್ಟಿದೆ. ಬಹುತೇಕ ಕೋವಿಡ್ ಪೀಡಿತರಿಗೆ ಲಕ್ಷಣಗಳು ಬಹಿರಂಗವಾಗಿ ಗೋಚರಿಸದಿರುವುದರಿಂದ ವಸತಿ ನಿಲಯದಲ್ಲಿಯೇ ಆರೈಕೆಗೆ ವ್ಯವಸ್ಥೆ ಮಾಡಲಾಗಿದೆ.

‘ಎಲ್ಲ ವಿದ್ಯಾರ್ಥಿಗಳಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೆಲವರ ವರದಿ ಬರಬೇಕಿದೆ. ಸೋಂಕು ನಿವಾರಕ ದ್ರಾವಣದಿಂದ ಕಾಲೇಜನ್ನು ಸ್ವಚ್ಛಪಡಿಸಲಾಗಿದೆ. ಸೋಂಕಿತರಾದವರೆಲ್ಲರೂ ವಿದ್ಯಾರ್ಥಿನಿಗಳಾಗಿ, ಬಹುತೇಕರಿಗೆ ಲಕ್ಷಣಗಳು ಗೋಚರಿಸಿಲ್ಲ. ಹಾಗಾಗಿ, ಕಾಲೇಜಿನ ವಸತಿ ನಿಲಯದಲ್ಲಿಯೇ ಆರೈಕೆಗೆ ಒಳಪಡಿಸಲಾಗಿದೆ. ಕೆಲ ಪಾಲಕರು ಮಕ್ಕಳನ್ನು ಮನೆ ಆರೈಕೆಗೆ ಕರೆದೊಯ್ದಿದ್ದಾರೆ. ಸಂಬಂಧಪಟ್ಟ ಜಿಲ್ಲೆಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ಡಾ.ಜಿ. ಶ್ರೀನಿವಾಸ್ ತಿಳಿಸಿದರು.

‘ಪ್ರಾಥಮಿಕ ಸಂಪರ್ಕದಲ್ಲಿರುವ58 ಮಂದಿಯನ್ನೂ ಪ್ರತ್ಯೇಕಿಸಿ ಕ್ವಾರೆಂಟೈನ್‌ ಮಾಡಲಾಗಿದೆ. ಕಾಲೇಜಿನಿಂದ ವಿದ್ಯಾರ್ಥಿಗಳು ಹೊರಹೋಗದಂತೆ ಬಿಗಿ ಕ್ರಮಕೈಗೊಳ್ಳಲಾಗಿದೆ. ಈ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಿ, ಪ್ರವೇಶ ನಿಷೇಧಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಯ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.