ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ನೀರುಗಂಟಿ ಚಿಕ್ಕೂಸ ನಾಯಕ ಆತ್ಮಹತ್ಯೆ ಸೇರಿ ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಮಿಕರ ಸರಣಿ ಆತ್ಮಹತ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ), ಸರ್ಕಾರದ ಹೊಣೆಗೇಡಿತನವನ್ನು ಖಂಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಎಐಯುಟಿಯುಸಿ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ, ‘ಮೃತರ ಕುಟುಂಬಕ್ಕೆ ಕೂಡಲೇ ₹50 ಲಕ್ಷ ನೆರವು ಹಾಗೂ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಮೃತರಿಗೆ ಬಾಕಿ ಇರುವ 27 ತಿಂಗಳ ವೇತನವನ್ನು ತಕ್ಷಣವೇ ಅವರ ಕುಟುಂಬಕ್ಕೆ ಪಾವತಿಸಬೇಕು‘ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಗ್ರಂಥಾಲಯ ಮೇಲ್ವಿಚಾರಕಿಯೊಬ್ಬರ ಆತ್ಮಹತ್ಯೆ ಘಟನೆ ಬೆನ್ನಲ್ಲೇ ಕಾರ್ಮಿಕರೊಬ್ಬರು ವೇತನ ವಿಳಂಬದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೇತನವಿಲ್ಲದೆ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ನಿರಂತರವಾಗಿ ಅವರು ಮಾಡಿಕೊಂಡಿರುವ ಮನವಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಹ ಸ್ಪಂದಿಸದಿರುವುದು ಆಡಳಿತ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
27 ತಿಂಗಳು ವೇತನವಿಲ್ಲದೆ ಹೇಗೆ ಜೀವನ ಸಾಗಿಸುವುದು? ಇಂತಹ ಕನಿಷ್ಠ ಮಾನವೀಯತೆಯೂ ಇಲ್ಲದೆ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಡೆದುಕೊಂಡಿರುವುದು ಪ್ರಜಾತಂತ್ರ ಮತ್ತು ಕಾರ್ಮಿಕ ಕಾನೂನುಗಳ ಅಣಕವಾಗಿದೆ. ಸರಿಯಾದ ಸಮಯಕ್ಕೆ ವೇತನ ಪಡೆಯುವುದು ಕಾರ್ಮಿಕನ ಮೂಲಭೂತ ಹಕ್ಕು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇಲಾಖೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ, ಹೊರ ಗುತ್ತಿಗೆ, ದಿನಗೂಲಿಗಳು ಮತ್ತು ಕಾಯಂ ನೌಕರರ ವೇತನ ಪಾವತಿಯ ಸ್ಥಿತಿಗತಿಗಳ ಬಗ್ಗೆ ಸರ್ಕಾರ ಸಮಗ್ರ ಪರಿಶೀಲನಾ ಸಮಿತಿ ರಚಿಸಿ, ತಕ್ಷಣ ವರದಿ ತರಿಸಿಕೊಂಡು, ಬಾಕಿ ವೇತನ ನೀಡಬೇಕು. ಇಂತಹ ದುರಂತಗಳು ಸಂಭವಿಸದಂತೆ ತಡೆಯಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.