ADVERTISEMENT

ಅಭ್ಯರ್ಥಿ, ನೋಟಾಕ್ಕೆ ಒಂದೇ ಕ್ರಮ ಸಂಖ್ಯೆ: ಚಂದಾಪುರ ಪುರಸಭೆಯಲ್ಲಿ ಅವಾಂತರ

ಚಂದಾಪುರ ಪುರಸಭೆಯಲ್ಲಿ ಅವಾಂತರ: ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 19:59 IST
Last Updated 27 ಡಿಸೆಂಬರ್ 2021, 19:59 IST
ಆನೇಕಲ್‌ ತಾಲ್ಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯ ಮತಗಟ್ಟೆಯೊಂದರ ಬಳಿ ಮತದಾರರ ಮನವೊಲಿಸುವಲ್ಲಿ ನಿರತರಾಗಿರುವ ಕಾರ್ಯಕರ್ತರು
ಆನೇಕಲ್‌ ತಾಲ್ಲೂಕಿನ ಚಂದಾಪುರ ಪುರಸಭೆ ವ್ಯಾಪ್ತಿಯ ಮತಗಟ್ಟೆಯೊಂದರ ಬಳಿ ಮತದಾರರ ಮನವೊಲಿಸುವಲ್ಲಿ ನಿರತರಾಗಿರುವ ಕಾರ್ಯಕರ್ತರು   

ಆನೇಕಲ್:ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ ಸೇರಿದಂತೆ ಮೂರು ನಗರ ಸ್ಥಳೀಯ ಸಂಸ್ಥೆಗಳಿಗೆ ಸೋಮವಾರ ನಡೆದ ಚುನಾವಣೆಯು ಸಣ್ಣಪುಟ್ಟ ಘಟನೆ ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿತ್ತು.

ಬೆಳಿಗ್ಗೆ ಬಿರುಸಿನಿಂದ ಪ್ರಾರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಮಂದಗತಿಯಲ್ಲಿ ಸಾಗಿತ್ತು. ಸಂಜೆ ವೇಳೆಗೆ ಮತ್ತೆ ಬಿರುಸಿನಿಂದ ಕೂಡಿತ್ತು. ಕಾರ್ಮಿಕರೇ ಹೆಚ್ಚಾಗಿರುವ ಹೆಬ್ಬಗೋಡಿ ನಗರಸಭೆಯಲ್ಲಿ 59,205 ಮತದಾರರಿದ್ದರು. ಈ ಪೈಕಿ ಮಧ್ಯಾಹ್ನ 3ರ ವೇಳೆಗೆ ಶೇ 36.84ರಷ್ಟು ಮತದಾನವಾಗಿತ್ತು.

ಹೆಬ್ಬಗೋಡಿಯಲ್ಲಿ ಮತದಾರರ ಮನವೊಲಿಸಲು ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಮುಖಂಡರು ಕೊನೆಯ ಹಂತದ ಕಸರತ್ತು ಮಾಡುತ್ತಿದ್ದುದು ಕಂಡುಬಂದಿತು. ಹೆಬ್ಬಗೋಡಿಯ ಬಿಇಎಸ್‌ ಶಾಲೆಯಲ್ಲಿ 13 ಮತಗಟ್ಟೆಗಳನ್ನು ಒಂದೆಡೆ ಸ್ಥಾಪಿಸಿದ್ದರಿಂದ ಎಲ್ಲಾ ಮತಗಟ್ಟೆಗಳ ಮತದಾರರು ಕಿರಿದಾದ ರಸ್ತೆಯಲ್ಲಿ ಜಮಾಯಿಸಿದ್ದರು.

ADVERTISEMENT

ಚಂದಾಪುರ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ 57.44ರಷ್ಟು ಮತದಾನವಾಗಿದೆ. ರಾಮಸಾಗರ ಕ್ಷೇತ್ರದ 3 ಮತ್ತು 3ಎ ಮತಗಟ್ಟೆಯ ಮತ ಪತ್ರದಲ್ಲಿ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕ್ರಮಸಂಖ್ಯೆ ನೀಡುವಾಗ ಕ್ರಮ ಸಂಖ್ಯೆ 5ರ ಪಕ್ಷೇತರ ಅಭ್ಯರ್ಥಿ ಮತ್ತು ನೋಟಾಕ್ಕೆ ಕ್ರಮಸಂಖ್ಯೆ 5 ಅನ್ನೇ ನೀಡಿದ್ದರಿಂದ ಗೊಂದಲ ಉಂಟಾಗಿತ್ತು.

ಅಭ್ಯರ್ಥಿಗಳು ತಕರಾರು ತೆಗೆಯುವ ವೇಳೆಗೆ ಎರಡೂ ಮತಗಟ್ಟೆಗಳಲ್ಲಿ 154 ಮತಗಳು ಚಲಾವಣೆಯಾಗಿದ್ದವು. ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಎಂ. ಮಲ್ಲೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಮಹಾನಂದ್‌ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಚಂದಾಪುರ ಪುರಸಭೆಯ 3ನೇ ವಾರ್ಡ್‌ನ ಅಭ್ಯರ್ಥಿ ಸೌಮ್ಯಾ ಸುಧಾಕರ್‌ ಮಾತನಾಡಿ, ‘ಕ್ರಮಸಂಖ್ಯೆ 5 ಎಂದು ಪ್ರಚಾರ ಮಾಡಲಾಗಿದೆ. ನನ್ನ ಹೆಸರು ಮತ್ತು ನೋಟಾಗೆ ಕ್ರಮ ಸಂಖ್ಯೆ 5 ಅನ್ನೇ ನೀಡಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದರು.

ಎಲ್ಲಾ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಒಂದು ತಾಸು ಮತದಾನ ಸ್ಥಗಿತವಾಗಿ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಪಿ. ದಿನೇಶ್‌, ಎಲ್ಲಾ ಅಭ್ಯರ್ಥಿಗಳ ಒಪ್ಪಿಗೆ ಪಡೆದು ಕ್ರಮ ಸಂಖ್ಯೆ ಬದಲಾಯಿಸಿದ ನಂತರ ಮತದಾನ ಸುಗಮವಾಗಿ ನಡೆಯಿತು. ಒಂದು ತಾಸು ಹೆಚ್ಚುವರಿಯಾಗಿ ಸಮಯ ನೀಡಲಾಯಿತು.

ಜಿಗಣಿ ಪುರಸಭೆ ವ್ಯಾಪ್ತಿಯ 23 ಸ್ಥಾನಗಳಿಗೆ ಬೆಳಿಗ್ಗೆ ಬಿರುಸಿನಿಂದ ಪ್ರಾರಂಭವಾದ ಮತದಾನ ಸಂಜೆಯವರೆಗೂ ವೇಗದಲ್ಲಿ ನಡೆಯಿತು. ಶೇ 67.7ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.