ADVERTISEMENT

‘ಜನ ಬಯಸುವ ಆಡಳಿತ ನೀಡುವ ಯೋಗ್ಯತೆ ನಮಗಿಲ್ಲ’

‘ಚಂದ್ರಶೇಖರ್‌– ದಿ ಲಾಸ್ಟ್‌ ಐಕಾನ್‌ ಆಫ್‌ ಐಡಿಯಾಲಾಜಿಕಲ್‌ ಪಾಲಿಟಿಕ್ಸ್‌’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 20:06 IST
Last Updated 28 ಸೆಪ್ಟೆಂಬರ್ 2019, 20:06 IST
ಹರಿವಂಶ್‌(ಎಡದಿಂದ ಮೂರನೆಯವರು) ಮತ್ತು ರವಿದತ್ತ ವಾಜಪೇಯಿ ಅವರ ‘ಚಂದ್ರಶೇಖರ್‌; ದಿ ಲಾಸ್ಟ್‌ ಐಕಾನ್‌ ಆಫ್‌ ಐಡಿಯಾಲಾಜಿಕಲ್‌ ಪಾಲಿಟಿಕ್ಸ್‌’ ಇಂಗ್ಲಿಷ್ ಕೃತಿಯನ್ನು ಶಾಸಕ ರಮೇಶ್ ಕುಮಾರ್ ಶನಿವಾರ ಬಿಡುಗಡೆ ಮಾಡಿದರು. ಬಸವರಾಜ ಬೊಮ್ಮಾಯಿ, ಬಿ.ಎಲ್‌. ಶಂಕರ್ ಹಾಗೂ ಸುಧೀಂದ್ರ ಬದೋರಿಯಾ ಇದ್ದಾರೆ  -–-ಪ್ರಜಾವಾಣಿ ಚಿತ್ರ
ಹರಿವಂಶ್‌(ಎಡದಿಂದ ಮೂರನೆಯವರು) ಮತ್ತು ರವಿದತ್ತ ವಾಜಪೇಯಿ ಅವರ ‘ಚಂದ್ರಶೇಖರ್‌; ದಿ ಲಾಸ್ಟ್‌ ಐಕಾನ್‌ ಆಫ್‌ ಐಡಿಯಾಲಾಜಿಕಲ್‌ ಪಾಲಿಟಿಕ್ಸ್‌’ ಇಂಗ್ಲಿಷ್ ಕೃತಿಯನ್ನು ಶಾಸಕ ರಮೇಶ್ ಕುಮಾರ್ ಶನಿವಾರ ಬಿಡುಗಡೆ ಮಾಡಿದರು. ಬಸವರಾಜ ಬೊಮ್ಮಾಯಿ, ಬಿ.ಎಲ್‌. ಶಂಕರ್ ಹಾಗೂ ಸುಧೀಂದ್ರ ಬದೋರಿಯಾ ಇದ್ದಾರೆ  -–-ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಪರ್ಯಾಯ ರಾಜಕೀಯ ವ್ಯವಸ್ಥೆ ತರಲು ಜನ ತಯಾರಿರುತ್ತಾರೆ. ಆದರೆ, ಅದಕ್ಕೆ ತಕ್ಕ ಆಡಳಿತ ನೀಡಲು ನಾವೇ (ಜನಪ್ರತಿನಿಧಿಗಳು) ಯೋಗ್ಯರಾಗಿಲ್ಲ’ ಎಂದು ಶಾಸಕ ರಮೇಶ್‌ಕುಮಾರ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ‘ಚಂದ್ರಶೇಖರ್‌– ದಿ ಲಾಸ್ಟ್‌ ಐಕಾನ್‌ ಆಫ್‌ ಐಡಿಯಾಲಾಜಿಕಲ್‌ ಪಾಲಿಟಿಕ್ಸ್‌’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶವು ಮೊದಲಿನಿಂದಲೂ ಎಡಪಂಥೀಯ ವಿಚಾರಧಾರೆಗಳನ್ನೇ ಹೆಚ್ಚು ಪ್ರತಿಪಾದಿಸುತ್ತಾ ಬಂದಿದೆ. ಕಾಂಗ್ರೆಸ್‌ ಬಹುಮತ ಹೊಂದಿದ್ದಾಗಲೂ, ಕಮ್ಯುನಿಸ್ಟ್‌ ಪಕ್ಷದ ಸಂಸದರ ಸಂಖ್ಯೆ 25ಕ್ಕಿಂತ ಹೆಚ್ಚಿತ್ತು. ಜನರಲ್ಲಿ ವೈಚಾರಿಕ ಪ್ರಜ್ಞೆ ಹೆಚ್ಚಾಗಿಯೇ ಇರುತ್ತದೆ. ಆದರೆ, ಸಮರ್ಥ ಪರ್ಯಾಯ ನಾಯಕತ್ವ ಸೃಷ್ಟಿಯಾಗಬೇಕಿದೆ’ ಎಂದರು.

‘ಬಿಜೆಪಿಯು ಸಂವಿಧಾನಬದ್ಧವಾಗಿ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ. ಸಂವಿಧಾನದ ಪ್ರಕಾರ ಬಿಜೆಪಿ ಮತ್ತು ಪ್ರಧಾನಿಯನ್ನು ನಾವು ಒಪ್ಪಿಕೊಳ್ಳಬೇಕು. ಆದರೆ, ತಾತ್ವಿಕ ನೆಲೆಗಟ್ಟಿನಲ್ಲಿ ಹೋರಾಟ ನಡೆಸಬೇಕು’ ಎಂದರು.

ADVERTISEMENT

‘ಕಾಂಗ್ರೆಸ್‌ ಪಕ್ಷದ ಸಭೆಯಲ್ಲಿ ಪ್ರಧಾನಿ ಇಂದಿರಾ ಗಾಂಧಿ ನಿಲುವುಗಳನ್ನುಪ್ರಶ್ನಿಸಿದ್ದವರು ಚಂದ್ರಶೇಖರ್‌. ತುರ್ತು ಪರಿಸ್ಥಿತಿ ವಿರೋಧಿಸಿ ಭಾರತ ಯಾತ್ರಾ ಕೈಗೊಂಡಿದ್ದರು. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುವ, ಸತ್ಯವಾಗಿದ್ದರೆ ಒಂಟಿಯಾಗಿ ಹೋರಾಡುವ ಧೈರ್ಯ ಅವರಲ್ಲಿತ್ತು. ಆದರೆ, ಇಂದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಕುಸಿದಿದೆ’ ಎಂದು ರಮೇಶ್‌ಕುಮಾರ್‌ ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಆಡಳಿತ ಮತ್ತು ವಿರೋಧ ಪಕ್ಷಗಳೇ ರಾಜಕಾರಣವಲ್ಲ. ಜನರ ಪಾಲ್ಗೊಳ್ಳುವಿಕೆ ಇರುವ ಪ್ರಜಾಪ್ರಭುತ್ವ ಅಗತ್ಯ’ ಎಂದರು.

‘ಜನರ ಪರ ರಾಜಕಾರಣ ಮತ್ತು ಅಧಿಕಾರ ರಾಜಕಾರಣಗಳಲ್ಲಿ ಚಂದ್ರಶೇಖರ್‌ ಮೊದಲನೆಯದ್ದನ್ನು ಆಯ್ಕೆ ಮಾಡಿದ್ದರು. ಅವರು ಅಧಿಕಾರದ ಹಿಂದೆ ಎಂದೂ ಹೋಗಲಿಲ್ಲ’ ಎಂದು ಸ್ಮರಿಸಿದರು.

ಕೃತಿಯ ಲೇಖಕ, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್‌, ‘ನಗರದ ಗಾಂಧಿಭವನದಲ್ಲಿ ಭಾಷಣ ಮಾಡುವ ಮೂಲಕ ಬೆಂಗಳೂರಿನಿಂದಲೇ ಭಾರತ ಯಾತ್ರೆಗೆ ಚಂದ್ರಶೇಖರ್‌ ಚಾಲನೆ ನೀಡಿದ್ದರು. ‘ಯಂಗ್‌ ಟರ್ಕ್‌’ ಎಂದೇ ಖ್ಯಾತರಾಗಿದ್ದ ಅವರು ಎಷ್ಟು ವಿಶಿಷ್ಟರಾಗಿದ್ದರು, ಅವರ ಮಹತ್ವ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಈ ಪುಸ್ತಕವನ್ನು ಓದಬೇಕು’ ಎಂದರು.

ಚಂದ್ರಶೇಖರ್‌ ಅವರ ಸಂಪುಟದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಭಕ್ತಚರಣ್‌ದಾಸ್‌, ಭಾರತ್‌ ಯಾತ್ರಾ ಕೇಂದ್ರ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಸುಧೀಂದ್ರ ಬದೋರಿಯಾ ಮಾತನಾಡಿದರು.

‘ನಾಯಕರನ್ನು ಖಳರನ್ನಾಗಿಸುವ ಮಾಧ್ಯಮ’

ಜಾತ್ಯತೀತ ಮೌಲ್ಯ ಪ್ರತಿಪಾದಿಸಿದ, ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕಾಗಿ ಹೋರಾಡಿದ, ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರನ್ನೂ ಮಾಧ್ಯಮಗಳು ಖಳನಂತೆ ಬಿಂಬಿಸಿದವು’ ಎಂದು ಶಾಸಕ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

‘ಈ ಮಾಧ್ಯಮಗಳೇ ಹೀಗೆ, ಖಳರನ್ನು ನಾಯಕರಂತೆ, ನಾಯಕರನ್ನು ಖಳರಂತೆ ಬಿಂಬಿಸುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಂಸದ ಮುನಿಯಪ್ಪ ನಿಮ್ಮನ್ನು ಕಳ್ಳ ಎಂದು ಕರೆದಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ‘ಹೌದು, ನಾನು ಕಳ್ಳನೇ’ ಎಂದು ಉತ್ತರಿಸಿದರು.

‘ದೇಶದಲ್ಲಿ ಜ್ವಲಂತ ಸಮಸ್ಯೆಗಳು ಬೇಕಾದಷ್ಟಿವೆ. ಆ ಕಡೆ ಮಾಧ್ಯಮಗಳು ಗಮನ ಹರಿಸಬೇಕು’ ಎಂದು ಅಸಮಾಧಾನದಿಂದಲೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.