ADVERTISEMENT

ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ– ಪ್ರಹಸನ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 20:10 IST
Last Updated 24 ಜುಲೈ 2022, 20:10 IST
ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ ಪ್ರಹಸನ’, ಬಿ. ಜಯಶ್ರೀ ಮತ್ತು ಪ್ರತಿಭಾ ನಂದಕುಮಾರ್‌ ಅವರ ‘ಕರಿಮಾಯಿ’ ನಾಟಕ ಕೃತಿ ಹಾಗೂ ‘ಕಂಬಾರರ ಕಾವ್ಯ ಮತ್ತು ನಾಟಕ’ ಪುಸ್ತಕಗಳನ್ನು ಸಾಹಿತಿ ಎಚ್‌.ಎಸ್‌. ಶಿವಪ್ರಕಾಶ್‌ ಭಾನುವಾರ ಬಿಡುಗಡೆ ಮಾಡಿದರು. ರಂಗ ವಿಮರ್ಶಕ ನಾರಾಯಣ ರಾಯಚೂ‌ರ್‌, ವಿಮರ್ಶಕ ಎಚ್.ಆರ್‌. ವಿಜಯಶಂಕರ್‌, ರಂಗಕರ್ಮಿ ಬಿ. ಜಯಶ್ರೀ, ಕವಯತ್ರಿ ಪ್ರತಿಭಾ ನಂದಕುಮಾರ್‌ ಇದ್ದರು
ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ ಪ್ರಹಸನ’, ಬಿ. ಜಯಶ್ರೀ ಮತ್ತು ಪ್ರತಿಭಾ ನಂದಕುಮಾರ್‌ ಅವರ ‘ಕರಿಮಾಯಿ’ ನಾಟಕ ಕೃತಿ ಹಾಗೂ ‘ಕಂಬಾರರ ಕಾವ್ಯ ಮತ್ತು ನಾಟಕ’ ಪುಸ್ತಕಗಳನ್ನು ಸಾಹಿತಿ ಎಚ್‌.ಎಸ್‌. ಶಿವಪ್ರಕಾಶ್‌ ಭಾನುವಾರ ಬಿಡುಗಡೆ ಮಾಡಿದರು. ರಂಗ ವಿಮರ್ಶಕ ನಾರಾಯಣ ರಾಯಚೂ‌ರ್‌, ವಿಮರ್ಶಕ ಎಚ್.ಆರ್‌. ವಿಜಯಶಂಕರ್‌, ರಂಗಕರ್ಮಿ ಬಿ. ಜಯಶ್ರೀ, ಕವಯತ್ರಿ ಪ್ರತಿಭಾ ನಂದಕುಮಾರ್‌ ಇದ್ದರು   

ಬೆಂಗಳೂರು: ‘ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ಬಂಡವಾಳಶಾಹಿ ಹಾಗೂ ಸಮಾಜವಾದಿಗಳ ಅತಿರೇಕವನ್ನು ಟೀಕೆ ಮಾಡಲಾಗಿತ್ತು. ಆ ಕಾಲದಲ್ಲೇ ಕಂಬಾರರು ಏಕೆ ಅಷ್ಟೊಂದು ಟೀಕೆ ಮಾಡುತ್ತಿದ್ದರು ಎಂದು ಈಗ ಅರ್ಥವಾಗುತ್ತಿದೆ’ ಎಂದು ಸಾಹಿತಿ ಎಚ್‌.ಎಸ್‌. ಶಿವಪ್ರಕಾಶ್‌ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಮತ್ತು ಬುಕ್ ಬ್ರಹ್ಮದ ಜಂಟಿ ಆಶ್ರಯದಲ್ಲಿ ಚಂದ್ರಶೇಖರ ಕಂಬಾರರ ‘ಮಾತೋಶ್ರೀ ಮಾದಕ– ಪ್ರಹಸನ’, ಬಿ. ಜಯಶ್ರೀ ಮತ್ತು ಪ್ರತಿಭಾ ನಂದಕುಮಾರ್ ಅವರ ‘ಕರಿಮಾಯಿ’ ನಾಟಕ ಕೃತಿ ಹಾಗೂ ‘ಕಂಬಾರರ ಕಾವ್ಯ ಮತ್ತು ನಾಟಕ’ ಪುಸ್ತಕಗಳನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕಂಬಾರರ ನಾಟಕಗಳಲ್ಲಿ ವಿಡಂಬನೆ ಮೂಲಕ ನವೋದಯ, ನವ್ಯ ಸಾಹಿತ್ಯಗಳಿಗಿಂತ ಭಿನ್ನವಾಗಿ ವಾಸ್ತವಗಳ ಪರಿಚಯವಾಗುತ್ತದೆ. ಜನಪದ ಸಾಹಿತ್ಯವನ್ನು ಅಳವಡಿಸಿಕೊಂಡ ಚಿಕಿತ್ಸಾತ್ಮಕ ಬರವಣಿಗೆ ಕಂಬಾರರದ್ದು’ ಎಂದರು.

ADVERTISEMENT

ವಿಮರ್ಶಕ ಎಚ್.ಆರ್‌. ವಿಜಯಶಂಕರ್‌ ಅವರು ಮೂರು ಕೃತಿಗಳ ಪರಿಚಯ ಮಾಡಿಕೊಟ್ಟರು. ‘ಕುರ್ತಕೋಟಿಯವರ ಪ್ರಕಾರ, ಬೆಳಗಾವಿಯಲ್ಲಿ ಪ್ರಾಧ್ಯಾಪಕರಾಗಿದ್ದ ಕಂಬಾರರು ಅಲ್ಲಿ ಪ್ರಥಮ ಬಾರಿಗೆ ‘ಹೇಳತೇನ ಕೇಳ’ ಕವನ ಹಾಡಿದ್ದರು. ಅದರ ಗುಂಗಿನಿಂದ ನಾನಿನ್ನೂ ಹೊರಬಂದಿಲ್ಲ. 40 ವರ್ಷಗಳ ಬಳಿಕ ಕುರ್ತಕೋಟಿಯವರು ಈ ಮಾತನ್ನು ಹೇಳಿದ್ದಾರೆ ಎಂದರೆ ಅವರ ಸೃಜನಶೀಲ ಪ್ರತಿಭೆಗೆ ಒಂದು ಗೌರವ’ ಎಂದರು.

ಯಶಸ್ಸು ನಿರೀಕ್ಷಿಸಿರಲಿಲ್ಲ: ‘ಕರಿಮಾಯಿ’ ಕಾದಂಬರಿ ನಾಟಕವಾಗಿ ಯಶ ಕಾಣುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಬಿ. ಜಯಶ್ರೀ ಅವರು ಅದನ್ನು ಸಾಧ್ಯವಾಗಿಸಿದರು. ನಾಟಕದ ಆರಂಭದಲ್ಲಿ ‘ತಾಯೇ..’ ಎಂಬ ಹಾಡಿನ ಸೆಳೆತ ನಾಟಕ ಮುಗಿಯುವವರೆಗೂ ಉಳಿಸಿಕೊಂಡಿದೆ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅವರು ಶ್ಲಾಘಿಸಿದರು.

ಎಂಟು ದಿನಗಳಲ್ಲಿ ನಾಟಕ: ‘ಕರಿಮಾಯಿ’ ಕಾದಂಬರಿಯನ್ನು ಎಂಟು ದಿನಗಳಲ್ಲಿ ನಾಟಕ ರೂಪಕ್ಕೆ ತರಲಾಯಿತು. ಕೊನೆಯ ಹಾಡನ್ನು ಬರೆದುಕೊಡಲು ಕಂಬಾರರು ತುಂಬಾ ಸತಾಯಿಸಿದ್ದರು. ಅವರನ್ನು ಹಿಡಿಯುವುದೇ ಕಷ್ಟಕರವಾಗಿತ್ತು. ನಾಟಕವನ್ನು ನೋಡಿದ ಮೇಲೆ ಕಂಬಾರರು ಶ್ಲಾಘಿಸಿದರು ಎಂದು ರಂಗಕರ್ಮಿ ಬಿ. ಜಯಶ್ರೀ ಸ್ಮರಿಸಿಕೊಂಡರು. ‘ತಾಯೇ..’ ಹಾಡನ್ನೂ ಹಾಡಿದರು.

ರಂಗ ವಿಮರ್ಶಕ ನಾರಾಯಣ ರಾಯಚೂ‌ರ್‌ ಮಾತನಾಡಿ, ‘ಕಾದಂಬರಿ ನಾಟಕವಾಗಬಹುದು. ಅದನ್ನು ರಂಗದ ಮೇಲೆ ತಂದು ಯಶಸ್ಸು ಸಾಧಿಸಿದ್ದು ಇತಿಹಾಸವೇ ಸರಿ. ಬಿ. ಜಯಶ್ರೀ ಅವರು ಪ್ರತಿಭಾವಂತ ಕಲಾವಿದರನ್ನು ಈ ನಾಟಕದ ಮೂಲಕ ಹೊರ ತಂದರು’ ಎಂದರು.

ಸಮಾರಂಭವು ಬುಕ್‌ ಬ್ರಹ್ಮ ಫೇಸ್‌ ಬುಕ್‌ ಹಾಗೂ ಯೂಟ್ಯೂಬ್‌ ಚಾನೆಲ್‌ನಲ್ಲಿ ನೇರಪ್ರಸಾರಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.