ಬೊಮ್ಮನಹಳ್ಳಿ: ‘ಸಹಕಾರಿ ಬ್ಯಾಂಕುಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ಗ್ರಾಹಕರ ವಿಶ್ವಾಸ ಗಳಿಸಿ ಲಾಭದಾಯಕವಾಗಿ ಮುನ್ನಡೆಯುತ್ತಿದೆʼ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ಮಾಧವರೆಡ್ಡಿ ತಿಳಿಸಿದರು.
ಭಾನುವಾರ ಕೋರಮಂಗಲದಲ್ಲಿ ನಡೆದ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ʼಚಾರ್ಟರ್ಡ್ ಬ್ಯಾಂಕ್ 2022ನೇ ಸಾಲಿನ ದೇಶದ ಅತ್ಯುತ್ತಮ ಬ್ಯಾಂಕ್ ಎಂಬ ಭಾಜನಕ್ಕೆ ಪಾತ್ರವಾಗಿದೆ. ಜತೆಗೆ ಅನುತ್ಪಾದಕ ಆಸ್ತಿಯ ಪ್ರಮಾಣವನ್ನು ಶೂನ್ಯಕ್ಕಿಳಿಸಿದ ಸಾಧನೆ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದೆʼ ಎಂದು ಶ್ಲಾಘಿಸಿದರು.
ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಎಂ.ಮುನಿರೆಡ್ಡಿ ಮಾತನಾಡಿ, ‘ಕೇವಲ ₹80 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ಇಂದು ₹170 ಕೋಟಿ ವಹಿವಾಟು ನಡೆಸುವ ಹಂತಕ್ಕೆ ಬೆಳೆದಿದೆ. ಆರು ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆʼ ಎಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ನಾರಾಯಣ ಎಸ್. ಭಟ್, ಸಂಸ್ಥಾಪಕ ಅಧ್ಯಕ್ಷ ಎಂ.ನಾಗರಾಜ್, ಸಂಸ್ಥಾಪಕ ಉಪಾಧ್ಯಕ್ಷ ವಿಜಯರಾಘವ ರೆಡ್ಡಿ, ಬ್ಯಾಂಕಿನ ಸಿಇಒ ಕೆ.ಬಿ. ಶಿವಣ್ಣ, ಆಡಳಿತ ಮಂಡಳಿ ಸದಸ್ಯರಾದ ಮುನಿವೆಂಕಟಪ್ಪ, ವೆಂಕಟೇಶ್ ಅಯ್ಯರ್ ಭಾಗವಹಿಸಿದ್ದರು. ರಜತ ಮಹೋತ್ಸವದ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.