ADVERTISEMENT

ಅಂತರಂಗದ ಶುದ್ಧಿಗೆ ಚಾತುರ್ಮಾಸ್ಯ ಸಕಾಲ: ಸ್ವಹರಿಹರಪುರದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 15:52 IST
Last Updated 10 ಜುಲೈ 2025, 15:52 IST
ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಕೊಂಡರಾಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು
ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಕೊಂಡರಾಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದರು   

ಬೆಂಗಳೂರು: ‘ಅಂತರಂಗ ಶುದ್ಧಿ ಮಾಡಿಕೊಳ್ಳಲು ಪ್ರತಿಯೊಬ್ಬ ಮನುಷ್ಯನಿಗೂ ಚಾತುರ್ಮಾಸ್ಯ ಸಕಾಲ’ ಎಂದು ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. 

ಜಯನಗರದಲ್ಲಿರುವ ಕೊಂಡರಾಮ ದೇವಸ್ಥಾನದಲ್ಲಿ ಗುರುವಾರ 25ನೇ ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡ ಅವರು, ಆಶೀರ್ವಚನ ನೀಡಿದರು. 

‘ಚಾತುರ್ಮಾಸ್ಯದ ಈ ಸಂದರ್ಭದಲ್ಲಿ ನಿಯಮಿತ ಚೌಕಟ್ಟು ಹಾಗೂ ಇತಿ ಮಿತಿಯೊಳಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಅಂತರಂಗವನ್ನು ಶುದ್ಧಿ ಮಾಡಿಕೊಳ್ಳಬೇಕು. ಜಪ, ಪೂಜೆ ಪುನಸ್ಕಾರ, ವ್ರತ ಅಥವಾ ಪಾರಾಯಣವನ್ನು ಈ ಸಂಧರ್ಭದಲ್ಲಿ ಮಾಡಿದರೆ ಅಂತರಂಗ ಶುದ್ಧಿಯಾಗುತ್ತದೆ. ಅಂತರಂಗ ಶುದ್ಧಿಯಾದಾಗ ಮಾತ್ರ ಮನುಷ್ಯನಿಗೆ ಮನಸ್ಸು ಶುದ್ಧಿಯಾಗುತ್ತ‌ದೆ. ಮನಸ್ಸು ಶುದ್ಧಿಯಾದಾಗ ಮನೆಯಲ್ಲಿ ಆರೋಗ್ಯ, ಮನೆ ಮಂದಿಯಲ್ಲಿ ಒಳ್ಳೆ ರೀತಿಯ ಸಂಬಂಧಗಳು ಬೆಳೆಯುತ್ತವೆ’ ಎಂದು ಹೇಳಿದರು.

ADVERTISEMENT

ಚಾತುರ್ಮಾಸ್ಯ ಸೇವಾ ಸಮಿತಿಯ ಸಂಚಾಲಕ ನಾಗರಾಜ ಶೆಟ್ಟಿ, ‘ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿ ನಿತ್ಯ ಗುರುಗಳಿಂದ ನವಾವರಣ ಶ್ರೀಚಕ್ರ ಪೂಜೆ ನಡೆಯಲಿದೆ. ಸಂಜೆ ವೇಳೆ ಆಶೀರ್ವಚನ ಇರುತ್ತದೆ’ ಎಂದರು.

ಹರಿಹರಪುರ ಮಠದ ಆಡಳಿತಾಧಿಕಾರಿ ಚಂದ್ರನ್, ‘ಗುರುಗಳ ದರ್ಶನ ಮತ್ತು ಸೇವೆಯಿಂದ ಅಜ್ಞಾನ ತೊಲಗಿ, ವಿಜ್ಞಾನ ಪ್ರಾಪ್ತಿಯಾಗುತ್ತದೆ. ಅಜ್ಞಾನದಿಂದ ಜ್ಞಾನ ಪಡೆದು, ಜ್ಞಾನದಿಂದ ಮೋಕ್ಷ ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.