ADVERTISEMENT

ಪೂಜೆ ನೆಪದಲ್ಲಿ ‘ಮಹಾರಾಜ’ರಿಂದ ಲೂಟಿ!

‘ಆತ್ಮಕ್ಕೆ ಶಾಂತಿ’ ಕೊಡಿಸುವುದಾಗಿ ನಗ–ನಾಣ್ಯ ಪಡೆದು ವಂಚನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 20:14 IST
Last Updated 1 ಮಾರ್ಚ್ 2019, 20:14 IST
   

ಬೆಂಗಳೂರು: ‘ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ನಿಮ್ಮ ಪೋಷಕರ ಆತ್ಮಗಳಿಗೆ ಶಾಂತಿ ಸಿಕ್ಕಿಲ್ಲ. ತಕ್ಷಣ ಪೂಜೆ ಸಲ್ಲಿಸದಿದ್ದರೆ ನಿಮ್ಮ ಜೀವಕ್ಕೇ ಅಪಾಯವಿದೆ’ ಎಂದು ವ್ಯಾಪಾರಿಯೊಬ್ಬರಿಗೆ ಬೆದರಿಸಿದ ಮೂವರು ಸ್ವಾಮೀಜಿ ವೇಷಧಾರಿಗಳು, ಅವರಿಂದ ₹ 4.52 ಲಕ್ಷ ನಗದು ಹಾಗೂ 420 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾರೆ.

ಈ ಸಂಬಂಧ ಗಿರಿನಗರ 2ನೇ ಹಂತದ ನಿವಾಸಿ ಮಹೇಶ್ ಗುರುವಾರ ದೂರು ಕೊಟ್ಟಿದ್ದಾರೆ. ಅದರನ್ವಯ ಅವಿನಾಶ್ ಸುರೇಶ್, ಚೇತನ್ ಢಾಗೆ ಹಾಗೂ ರಾಜೇಶ್ ತಾಂಬೆ ಎಂಬುವರ ವಿರುದ್ಧ ವಂಚನೆ (ಐಪಿಸಿ 406, 420) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ ಎಂದು ಗಿರಿನಗರ ಪೊಲೀಸರು ಹೇಳಿದರು.

‘ಇತ್ತೀಚೆಗೆ ನಾವು ಒಡವೆ ಖರೀದಿಗೆಂದು ಆಭರಣ ಮಳಿಗೆಗೆ ಹೋಗಿದ್ದಾಗ, ಅಲ್ಲಿ ಅವಿನಾಶ್ ಸುರೇಶ್ ಎಂಬ ಸ್ವಾಮೀಜಿ ವೇಷಧಾರಿಯ ಪರಿಚಯವಾಯಿತು. ಹಸ್ತ ಹಾಗೂ ಮುಖಚಹರೆ ನೋಡಿ ಪತ್ನಿಯ ಭವಿಷ್ಯ ಹೇಳಿದ ಅವರು, ‘ನಾನು ಯಶವಂತಪುರದ ಮಠದಲ್ಲಿರುತ್ತೇನೆ’ ಎಂದು ಹೇಳಿದರು. ಅವರ ಮಾತು ನಂಬಿ ನಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದೆವು’ ಎಂದು ಮಹೇಶ್ ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಕೆಲ ದಿನಗಳ ನಂತರ ನಮ್ಮ ಮನೆಗೇ ಬಂದಿದ್ದ ಅವರು, ‘ನಿಮ್ಮ ಮನೆಯಲ್ಲಿ ಸಮಸ್ಯೆ ಇದೆ. ನಾನು ಪರಿಹಾರ ಕೊಡಿಸುತ್ತೇನೆ’ ಎಂದಿದ್ದರು. ಪತ್ನಿಯ ಮಾಂಗಲ್ಯ ಸರವನ್ನು ಪಡೆದುಕೊಂಡು ಹೋಗಿದ್ದ ಅವರು, ಅದಕ್ಕೆ ನವಗ್ರಹದ ಡಾಲರ್ ಹಾಕಿಕೊಂಡು ವಾರದ ಬಳಿಕ ತಂದು ಕೊಟ್ಟಿದ್ದರು. ಆ ನಂತರ ಪೂರ್ತಿಯಾಗಿ ನಂಬಿಬಿಟ್ಟೆವು.’

‘ವಾರದ ಬಳಿಕ ಚೇತನ್ ಢಾಗೆ ಹಾಗೂ ರಾಜೇಶ್ ತಾಂಬೆ ಎಂಬುವರನ್ನೂ ಮನೆಗೆ ಕರೆದುಕೊಂಡು ಬಂದ ಅವಿನಾಶ್, ‘ಇವರು ನಮ್ಮ ಮಹಾರಾಜರು. ನಿಮ್ಮ ಕುಟುಂಬದ ಹಿರಿಯರ ಆತ್ಮಕ್ಕೆ ಶಾಂತಿ ಮಾಡಲು ಬಂದಿದ್ದಾರೆ. ಮನೆಯಲ್ಲಿರುವ ಹಣ ಹಾಗೂ ಚಿನ್ನವನ್ನೆಲ್ಲ ಪೂಜೆಗೆ ಕೊಡಿ’ ಎಂದರು. ಅಂತೆಯೇ ನಾವು ₹ 4.52 ಲಕ್ಷ ನಗದು ಹಾಗೂ 420 ಗ್ರಾಂ ಚಿನ್ನವನ್ನು ಅವರಿಗೆ ಕೊಟ್ಟೆವು. ಮೂರು ತಿಂಗಳ ವಿಶೇಷ ಪೂಜೆ ನಂತರ ಮತ್ತೆ ಬರುವುದಾಗಿ ಹೇಳಿ ಮೂವರೂ ಹೊರಟು ಹೋದರು’ ಎಂದು ಮಹೇಶ್ ಆರೋಪಿಸಿದ್ದಾರೆ.

ಮಠಗಳಲ್ಲಿ ಶೋಧ: ‘ಈ ನಡುವೆ ಅವಿನಾಶ್ ನಮ್ಮನ್ನು ರಾಜಸ್ಥಾನದ ಮೌಂಟ್ ಅಬು, ಗುಜರಾತ್‌ನ ಸೋಮನಾಥ ದೇವಸ್ಥಾನ ಹಾಗೂ ಗೋಕರ್ಣಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸಿದ್ದರು. ಇದೇ ಫೆ.2ರಂದು ಹಣ–ಆಭರಣ ವಾಪಸ್ ಕೇಳಿದಾಗ, ‘ಫೆ.18ರಂದು ಮೂವರೂ ಸ್ವಾಮೀಜಿಗಳು ಮನೆಗೆ ಬಂದು ಮರಳಿಸುತ್ತೇವೆ’ ಎಂದಿದ್ದರು. ಆದರೆ, ಆ ನಂತರ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಯಶವಂತಪುರದ ಯಾವ ಮಠದಲ್ಲೂ ಅವಿನಾಶ್ ಸುರೇಶ್ ಹೆಸರಿನ ವ್ಯಕ್ತಿಯೇ ಇಲ್ಲ. ಹೀಗಾಗಿ, ವಂಚಕರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಮ್ಮನಿಗೂ ವಂಚನೆ!

‘ಸುರೇಶ್, ಚೇತನ್ ಹಾಗೂ ರಾಜೇಶ್ ಅವರು ಪೂಜೆ ನೆಪದಲ್ಲಿ ನನ್ನ ತಮ್ಮ ಪ್ರವೀಣ್ ಕುಟುಂಬದಿಂದಲೂ 350 ಗ್ರಾಂ ಚಿನ್ನ ಹಾಗೂ ₹ 10 ಲಕ್ಷ ಪಡೆದು ವಂಚಿಸಿದೆ’ ಎಂದೂ ಮಹೇಶ್ ಆರೋಪಿಸಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ ಎಂದು ಗಿರಿನಗರ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.